ಪರವಾನಗಿ ಇಲ್ಲದ ಬಂದೂಕುಗಳನ್ನು ನ.1ರೊಳಗೆ ಸರಕಾರಕ್ಕೆ ಒಪ್ಪಿಸಿ : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಪರವಾನಗಿ ಇಲ್ಲದ ಅಕ್ರಮ ಬಂದೂಕುಗಳನ್ನು ನವೆಂಬರ್ 1ರೊಳಗೆ ಸರಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದ ಮಲ್ಲೇಶ್ವರದ ಅರಣ್ಯ ಭವನದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೇಕ ಅರಣ್ಯ ಇಲಾಖೆ ಸಿಬ್ಬಂದಿ ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದ ನ.1ರೊಳಗೆ ಪರವಾನಗಿ ಹೊಂದಿಲ್ಲದ ಬಂದೂಕುಗಳನ್ನು ಸರಕಾರಕ್ಕೆ ಒಪ್ಪಿಸಬೇಕು ಎಂದರು.
ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
ಈ ಹಿಂದೆ ರಾಮಮೂರ್ತಿ ಎನ್ನುವ ಹಿರಿಯ ಅಧಿಕಾರಿಯು ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ ಹೇಳಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರಕಾರಕ್ಕೆ ಒಪ್ಪಿಸಿದ್ದೆ. ಇನ್ನೂ ಹೆಚ್ಚಿನ ನಾಡ ಬಂದೂಕುಗಳು ಇರುವ ಬಗ್ಗೆ ಸರಕಾರಕ್ಕೆ ಮಾಹಿತಿಯಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಜನ ಸಾಮಾನ್ಯರು ಪೊಲೀಸರನ್ನು ಒಪ್ಪಿಕೊಳ್ಳುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಪ್ಪುವುದಿಲ್ಲ. ಅರಣ್ಯದಂಚಿನ ಜನರೊಂದಿಗೆ ಸ್ನೇಹದ ವಾತಾವರಣ ನಿರ್ಮಿಸಿಕೊಳ್ಳಿ. ಅರಣ್ಯ ಒತ್ತುವರಿ ಇಂದು ನಿನ್ನೆಯದಲ್ಲ. ಅದನ್ನು ಕಾನೂನು ಪ್ರಕಾರ ಬಗೆಹರಿಸೋಣ. ಜನರ ಮೇಲೆ ಒತ್ತಡ ಹೇರಬೇಡಿ. ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲವೊಂದು ವಿಚಾರದಲ್ಲಿ ಅತಿಯಾಗಿ ವರ್ತಿಸುತ್ತೀರಿ. ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಬರಬಾರದು. ಕೆಲವೊಂದು ವಿನಾಯಿತಿಗಳನ್ನು ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.






