ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ವನ್ನು ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ್ದ ವಿವಿಧ 87 ಐತಿಹಾಸಿಕ ಸ್ಥಳಗಳಲ್ಲಿ ‘ಗಾಂಧಿ ಸ್ಮಾರಕ ಸ್ತಂಭ’ ಸ್ಥಾಪಿಸುವ ಕರ್ನಾಟಕ ಸರ್ಕಾರದ ಆಯವ್ಯಯ ಘೋಷಣೆಯ ಭಾಗವಾಗಿ, ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನ ಇಂದಿನ ಸರ್ಕಾರಿ ಕಲಾ ಕಾಲೇಜು (GAS ಕಾಲೇಜು) ಆವರಣದಲ್ಲಿ ಅನಾವರಣಗೊಳಿಸಿದರು.
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ಪೂರೈಸಿದ ನೆನಪಿಗಾಗಿ "ಗಾಂಧಿ ಭಾರತ" ಅಭಿಯಾನದಡಿಯಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸ್ಮಾರಕ ಸ್ತಂಭಗಳನ್ನು ನಿರ್ಮಿಸಲಾಗುತ್ತಿದೆ.
ಶಾಸಕರು ಹಾಗೂ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎಚ್. ಕೆ.ಪಾಟೀಲ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ.ಎಲ್.ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಜೆ. ಮಂಜುನಾಥ್ ಐ.ಎ.ಎಸ್. ಸೇರಿದಂತೆ ಗಾಂಧಿ ಭಾರತ ಸಮಿತಿಯ ಪದಾಧಿಕಾರಿಗಳು, ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರು, ಅಪಾರ ಸಂಖ್ಯೆಯ ವಿಧ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗಾಂಧಿ ಸ್ಮಾರಕ ಸ್ತಂಭ ಸಿದ್ದಡಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ನಾಗೇಂದ್ರ ಕುಮಾರ್ ಜಿ.ಸಿ. ನಿರ್ಮಿತಿ ಕೇಂದ್ರದ ಅಭಿಯಂತರರಾದ ರಾಜೀವ್ ಅವರನ್ನು ಸನ್ಮಾನಿಸಿದರು.
ಮಹಾತ್ಮ ಗಾಂಧೀಜಿಯವರು ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ 1915ರ ಮೇ 8ರ ಶನಿವಾರದಂದು ಪ್ರಥಮ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಅಂದು ಆಗಿನ ಸರ್ಕಾರಿ ಪ್ರೌಢಶಾಲೆಗೆ (ಇಂದಿನ ಸರ್ಕಾರಿ ಕಲಾ ಕಾಲೇಜು) ಭೇಟಿ ನೀಡಿ, ತಮ್ಮ ರಾಜಕೀಯ ಗುರುಗಳಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು. ಅದರ ನೆನಪಿಗಾಗಿ ಈ ಸಭಾಂಗಣಕ್ಕೆ ಬಾಪೂಜಿ ಅವರ ಹೆಸರು ಇರಿಸಲಾಗಿದ್ದು, ಈಗ ಇದೇ ಆವರಣದಲ್ಲಿ ಮೊದಲ ಗಾಂಧಿ ಸ್ಮಾರಕ ಸ್ತಂಭ ನಿರ್ಮಿಸಲಾಗಿದೆ.






