‘ಕಬ್ಬು ಬೆಳೆಗಾರರ ಬೇಡಿಕೆ’ ಈಡೇರಿಕೆಗೆ ಪ್ರಧಾನಿ ಮಧ್ಯಪ್ರವೇಶಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್/ಪ್ರಧಾನಿ ಮೋದಿ(PC : PTI)
ಬೆಂಗಳೂರು : ರಾಜ್ಯದ ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಅ.19ರಂದು ಬರೆದಿದ್ದ ಪತ್ರದ ಮುಂದುವರಿದ ಭಾಗವಾಗಿ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ವಿವರಿಸಿರುವ ಅವರು, ಕೇಂದ್ರ ಸರಕಾರ ಈ ವಿಚಾರದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅ.22ರಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ 2026-27ನೇ ಎಥೆನಾಲ್ ಪೂರೈಕೆ ವರ್ಷದಲ್ಲಿ ಕಬ್ಬಿನ ರಸ, ಸಿರಪ್ ಹಾಗೂ ಬಿ-ಹೆವಿ ಮೊಲಾಸಸ್ನಿಂದ ಎಥೆನಾಲ್ ಉತ್ಪಾದನೆ ಮಾಡದಂತೆ ನಿರ್ದೇಶನ ನೀಡಿದೆ. ಕರ್ನಾಟಕದ ಕಬ್ಬು ಆಧಾರಿತ ಡಿಸ್ಟಿಲರಿಗಳು 2025-26ರಲ್ಲಿ ಎಥೆನಾಲ್ನಿಂದ 5,803.7 ಕೋಟಿ ರೂ. ಆದಾಯ ಗಳಿಸಿದ್ದು, ಈ ಆದಾಯವು ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನಗಳೊಳಗೆ ಕಬ್ಬಿನ ಬಾಕಿ ಪಾವತಿಸಲು ನೆರವಾಗಿತ್ತು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅ.26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆಸಲಾಗಿದ್ದು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯಲ್ಲಿ ಹೆಚ್ಚಳವಾದರೆ ಅದರ ಲಾಭವನ್ನು ರೈತರಿಗೆ ವರ್ಗಾಯಿಸುವುದಾಗಿ ಕಾರ್ಖಾನೆಗಳು ಭರವಸೆ ನೀಡಿವೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಪ್ರೊ.ರಮೇಶ್ ಚಂದ್ ನೇತೃತ್ವದ ಸಮಿತಿಯು ಅ.29ರಂದು ಬೆಂಗಳೂರಿನಲ್ಲಿ ರೈತರು ಹಾಗೂ ತಜ್ಞರ ಅಭಿಪ್ರಾಯ ಆಲಿಸಿದ್ದು, ಅ.30ರಂದು ರಾಜ್ಯ ಸರಕಾರದ ಪ್ರತಿನಿಧಿಗಳಿಂದಲೂ ಮಾಹಿತಿ ಪಡೆದಿದೆ. ಈ ಸಮಿತಿಗೆ ರಾಜ್ಯ ಸರಕಾರವು ತನ್ನ ವಿವರವಾದ ಮನವಿಯನ್ನು ಸಲ್ಲಿಸಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 81 ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ. ಕಾರ್ಖಾನೆಗಳ ಪ್ರಯೋಗಾಲಯಗಳನ್ನು ತಿಂಗಳಿಗೆ ಎರಡು ಬಾರಿ ಪರಿಶೀಲಿಸಲಾಗುತ್ತಿದೆ. 2025-26ರಲ್ಲಿ ಕಬ್ಬಿನ ಸರಾಸರಿ ಸಕ್ಕರೆ ಇಳುವರಿ ಶೇ.11.09ಕ್ಕೆ ಏರಿಕೆಯಾಗಿದ್ದು, ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿಯಲ್ಲಿ ಶೇ.99.85ರಷ್ಟು ಪಾವತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ, ರಾಷ್ಟ್ರೀಯ ರೈತರ ಆಯೋಗ ಶಿಫಾರಸು ಮಾಡಿರುವ ಸಿ2 ವೆಚ್ಚದ ಜೊತೆಗೆ ಶೇ.50ರಷ್ಟು ಲಾಭದ ಆಧಾರದಲ್ಲಿ ಕಬ್ಬಿನ ಬೆಲೆ ನಿಗದಿಪಡಿಸುವುದು ಹಾಗೂ ಎಫ್ಆರ್ಪಿಗೆ ಮೂಲ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರಮುಖ ಬೇಡಿಕೆಗಳು: 2019ರ ಫೆ.14ರಿಂದ ಪ್ರತಿ ಕೆ.ಜಿ.ಗೆ 31 ರೂ. ಆಗಿಯೇ ಉಳಿದಿರುವ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಸುಮಾರು 45 ರೂ. ಇರುವುದರಿಂದ ಈ ಪರಿಷ್ಕರಣೆಯಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ ಬೀಳದೆ ರೈತರ ಪಾವತಿಗೆ ನೆರವಾಗಲಿದೆ.
ಅ.22ರ ಎಥೆನಾಲ್ ಉತ್ಪಾದನಾ ನಿರ್ದೇಶನವನ್ನು 2027ರ ಫೆಬ್ರವರಿಯ ಬೆಳೆ ಅಂದಾಜಿನ ಬಳಿಕ ಮರುಪರಿಶೀಲಿಸಬೇಕು. ಆರಂಭದಲ್ಲಿ ಬಿ-ಹೆವಿ ಮೊಲಾಸಸ್ಗೆ ಅವಕಾಶ ನೀಡಬೇಕು ಹಾಗೂ ಕಬ್ಬು ಆಧಾರಿತ ಎಥೆನಾಲ್ ಬೆಲೆಯನ್ನು ಪರಿಷ್ಕರಿಸಬೇಕು. ಕಡಿಮೆ ಸಕ್ಕರೆ ಇಳುವರಿ ಹೊಂದಿರುವ ಪ್ರದೇಶಗಳ ರೈತರಿಗೆ ಅನ್ಯಾಯವಾಗದಂತೆ ಎಫ್ಆರ್ಪಿಯ ಮೂಲ ಇಳುವರಿ ಪ್ರಮಾಣವನ್ನು ಶೇ.9.5ಕ್ಕೆ ಮರುಸ್ಥಾಪಿಸಬೇಕು.
ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಬೇಕು. ಎಥೆನಾಲ್ ಮತ್ತು ಸಹ-ವಿದ್ಯುತ್ ಉತ್ಪಾದನೆಯ ಆದಾಯವನ್ನೂ ಒಳಗೊಂಡಂತೆ ಆದಾಯ ಹಂಚಿಕೆ ಸೂತ್ರವನ್ನು ಮರುಪರಿಶೀಲಿಸಬೇಕು. ನೀತಿ ಆಯೋಗದ ಕಾರ್ಯಪಡೆ ಹಾಗೂ ಸಿಎಸಿಪಿ ಶಿಫಾರಸಿನಂತೆ ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಬೇಕು.
ಕೇಂದ್ರ ಸರಕಾರ ರೈತರು ಮತ್ತು ಗ್ರಾಹಕರ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಿದೆ. ಆದರೆ, ಮೊದಲ ಎರಡು ಬೇಡಿಕೆಗಳಿಗೆ ಪ್ರಸಕ್ತ ಹಂಗಾಮಿನಲ್ಲೇ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ. ಉಳಿದ ಬೇಡಿಕೆಗಳು ದೀರ್ಘಕಾಲೀನ ಸುಧಾರಣೆಗಳಿಗೆ ಸಂಬಂಧಿಸಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಕಾಲದಲ್ಲಿ ಕೇಂದ್ರ ಸರಕಾರ ಘೋಷಣೆ ಮಾಡಿದರೆ ರೈತರ ಪ್ರತಿಭಟನೆ ಅಂತ್ಯಗೊಳಿಸಲು ರಾಜ್ಯ ಸರಕಾರಕ್ಕೆ ಅನುಕೂಲವಾಗಲಿದ್ದು, ಕಬ್ಬು ಅರೆಯುವ ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗಲಿದೆ. ರಾಜ್ಯದ ಲಕ್ಷಾಂತರ ಕಬ್ಬು ಬೆಳೆಗಾರರು ಹಾಗೂ ಕರ್ನಾಟಕದ ಜನರ ಹಿತದೃಷ್ಟಿಯಿಂದ ಪ್ರಧಾನಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕು ಎಂದು ಶಿವಕುಮಾರ್ ಕೋರಿದ್ದಾರೆ.






