ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ : ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಪ್ರಗತಿ ಪರಿಶೀಲನೆ

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ 2008ರ ಜು.10ರ ಪೂರ್ವದಲ್ಲಿ ನಿರ್ಮಿಸಲಾದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಈ ಹಿಂದಿನ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದ ಬಿಡಿಎ ಕಚೇರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆಯು ಕಲಂ 38(ಡಿ) ತಿದ್ದುಪಡಿ ಮೂಲಕ ಈಗಾಗಲೇ ಜಾರಿಗೆ ಬಂದಿದ್ದು, ಡಿ.15ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎರಡು ವರ್ಷಗಳ ಅವಧಿಯೊಳಗಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳದಿದ್ದರೆ, ಬಿಡಿಎ ಭೂಮಿಯಲ್ಲಿರುವ ಅಂತಹ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ತಿ ದಾಖಲೆಗಳಿಲ್ಲದ ಭೂ ಮಾಲಕರಿಗೆ ಭೂ ಗ್ಯಾರಂಟಿ ಸೇರಿದಂತೆ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ತಿಳಿಸಿದರು.
2008ಕ್ಕಿಂತ ಮೊದಲು ಮನೆ ಕಟ್ಟಿದವರಿಗೆ, ಸುಮಾರು 1 ಲಕ್ಷ ಮಾಲಕರಿಗೆ ಆಸ್ತಿ ದೊರಕಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಸರಕಾರ ಅವಕಾಶ ನೀಡಿತು. 2021ರಲ್ಲಿಯೇ ದರ ನಿಗದಿ ಮಾಡಿತ್ತು. ಆದರೆ ಶುಲ್ಕ ಹೆಚ್ಚಾಯಿತೆಂದು ಕೇವಲ 600ಜನ ಮಾತ್ರ ಅರ್ಜಿ ಹಾಕಿದ್ದರು. ಆದರೆ ನಾವು ಶುಲ್ಕ ಕಡಿಮೆ ಮಾಡಿ ಇನ್ನೊಂದು ಅವಕಾಶ ನೀಡಿದ್ದೇವೆ ಎಂದು ತಿಳಿಸಿದರು.
ಸೂಕ್ತ ದಾಖಲೆಯೊಂದಿಗೆ ನಿಗದಿತ ಅವಧಿಯ ಒಳಗಾಗಿ ಅರ್ಜಿ ಸಲ್ಲಿಸಿ, ಈ ಸೌಲಭ್ಯವನ್ನು ಬಳಸಿಕೊಂಡು ಆಸ್ತಿಯ ಹಕ್ಕನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.
ಮೂಲೆ ನಿವೇಶನ ಹೊರತುಪಡಿಸಿ ಕಟ್ಟಡದೊಂದಿಗಿನ ಭೂಮಿಯ ವ್ಯಾಪ್ತಿ 20x30 ರವರೆಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು, 20x30ಕ್ಕಿಂತ ಹೆಚ್ಚು ಮತ್ತು 30x40 ರವರೆಗೆ ಶೇ.12.5ರಷ್ಟು, 30x40ಕ್ಕಿಂತ ಹೆಚ್ಚು ಮತ್ತು 40x60 ರವರೆಗೆ ಶೇ.20ರಷ್ಟು ಮತ್ತು 40x60ಕ್ಕಿಂತ ಹೆಚ್ಚು ಮತ್ತು 50x80 ರವರೆಗೆ ಶೇ.25ರಷ್ಟು ದರವನ್ನು ನಿಗದಿಪಡಿಸಲಾಗಿದೆ. ಇದು ಈ ಹಿಂದಿನ ಸರಕಾರ ನಿಗದಿಪಡಿಸಿದ್ದ ದರಕ್ಕಿಂತ ಶೇ.50ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
ಕೆಂಪೇಗೌಡ ಬಡಾವಣೆ ಸೇರಿದಂತೆ ಇತರ ಕಡೆಗಳಲ್ಲಿ ವ್ಯಾಜ್ಯವಿಲ್ಲದೆ ಸ್ವಇಚ್ಛೆಯಿಂದ ಆಸ್ತಿ ಬಿಟ್ಟು ಕೊಟ್ಟವರಿಗೆ ಒಂದು ಎಕರೆಗೆ 30x40 ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ವಿಶೇಷ ಪ್ರೊ ತ್ಸಾಹಕವಾಗಿ ನಿವೇಶನ ನೀಡುವ ಕಾರ್ಯ 2014ರಿಂದ ಬಾಕಿ ಇದ್ದು, ಇದಕ್ಕಾಗಿ ಸೂಕ್ತ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ಬೆಲೆ ನಿಗದಿ ಮಾಡಲಾಗುವುದು ಎಂದರು.
ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ನೀಡಿದ ರೈತರಿಗೆ ಒಂದೇ ದಿನದಲ್ಲಿ ನಿವೇಶನ ಮಂಜೂರಾತಿಯನ್ನು ಪಾರದರ್ಶಕವಾಗಿ ಮಾಡಿರುವುದು ಬಿಡಿಎ ಇತಿಹಾಸದಲ್ಲೇ ಮೊದಲು. ಜಮೀನು ನೀಡಿದ ರೈತರ ಉಪಕಾರ, ಸ್ಮರಣೆಯಾಗಿ ಅಲ್ಲಿ ವಾಲ್‍ಆಫ್ ಗ್ರ್ಯಾಟಿಟ್ಯೂಡ್ (ಕೃತಜ್ಞತಾ ಫಲಕ) ಹಾಕಿದ್ದೇವೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ ನಿವೇಶನಗಳ ಹಿಂಬದಿಯಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಅಂಚಿನ ಜಾಗಗಳು ಲಭ್ಯವಿದ್ದಲ್ಲಿ, ಅದರ ಬಗ್ಗೆ ಹಂಚಿಕೆದಾರರಿಗೆ ಆಸಕ್ತಿಯಿದ್ದಲ್ಲಿ ಡಿ.17.12.2026ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. 600ಚದರ ಅಡಿವರೆಗೂ ನಿವೇಶನ ನೀಡಲು ಅವಕಾಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳಬಹುದು ಎಂದು ತಿಳಿಸಿದರು.
ಶುದ್ಧ ಕ್ರಯಪತ್ರ ಮೇಳ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿ, ಗುತ್ತಿಗೆ ಅವಧಿಯು ಮುಕ್ತಾಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸಲಾಗಿದೆ. ನಿವೇಶನದ ದಾಖಲಾತಿಗಳೊಂದಿಗೆ ಡಿ.17ರೊಳಗೆ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿ ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಕ್ರಮವಹಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಡಿಎ 50ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ 1ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಬಹುಪಯೋಗಿ ಪ್ರಾಧಿಕಾರದ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಬಿಡಿಎ 50ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸುವುದರೊಳಗೆ ಜನರ ಸಮಸ್ಯೆಗಳು ಬಗೆಹರಿಯಬೇಕು.
- ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ






