ಶಾಲಾ ಪಠ್ಯದಲ್ಲಿ ʼಸಂವಿಧಾನʼ ಸೇರ್ಪಡೆಗೆ ಸಮಿತಿ ರಚನೆ : ಸಿಎಂ ಡಿ.ಕೆ.ಶಿವಕುಮಾರ್
ಮೈಸೂರಿನಲ್ಲಿ ʼಸಂವಿಧಾನ ದಿನಾಚರಣೆʼ

ಮೈಸೂರು : ವಿಶ್ವದ ಬೃಹತ್ ಲಿಖಿತ, ಸರ್ವರಿಗೂ ಸಮನ್ಯಾಯ ಕಲ್ಪಿಸಿರುವ ಭಾರತದ ಸಂವಿಧಾನ ಸಂರಕ್ಷಣೆಯ ಸಂಕಲ್ಪದೊಂದಿಗೆ ಐತಿಹಾಸಿಕ ಸಂವಿಧಾನ ದಿನಾಚರಣೆ ಗುರುವಾರ ಯಶಸ್ವಿಯಾಗಿ ಜರುಗಿತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮೈಸೂರಿನ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರ ಸಮ್ಮುಖದಲ್ಲಿ ಸಂವಿಧಾನ ಉಳಿವಿನಲ್ಲಿ ದೇಶದ ಉಳಿವಿದೆ ಎಂಬ ಸಂದೇಶವನ್ನು ರವಾನಿಸಿದರು.
ರಾಜ್ಯಮಟ್ಟದ ಸಂವಿಧಾನ ದಿನಾಚರಣೆಯಲ್ಲಿ ವರ್ತಮಾನದಲ್ಲಿ ಸಂವಿಧಾನಕ್ಕೆ ಎದುರಾಗಿರುವ ಆಪತ್ತನ್ನು ಒಗ್ಗಟ್ಟಿನಿಂದ ಎದುರಿಸಬೇಕೆಂದು ನಾಯಕರು ಕರೆ ನೀಡಿದರು.
ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಶಾಲಾ ಪಠ್ಯದಲ್ಲಿ ಸಂವಿಧಾನ ಸೇರ್ಪಡೆ ಸಂಬಂಧ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
ಸರ್ಕಾರಿ, ಖಾಸಗಿ ಶಾಲೆ ಸೇರಿ ಎಲ್ಲ ಮಕ್ಕಳಿಗೂ ಸಂವಿಧಾನದ ತಿಳವಳಿಕೆ ಕೊಡುವುದು ನಮ್ಮ ಜವಾಬ್ದಾರಿ ಎಂದರು.
ಸಂವಿಧಾನ ನ್ಯಾಯದ ಆಧಾರ. ದೇಶದ ಅಂತರಾತ್ಮ. 140 ಕೋಟಿ ಜನರ ಕನಸು ಮತ್ತು ಗೌರವ ಕಾಪಾಡುವುದು ಸಂವಿಧಾನ. ಶ್ರೀಮಂತ ಬಡವರಿಗೂ ಒಂದೇ ನ್ಯಾಯ. ದೇಶದ ಏಕೈಕ ರಾಷ್ಟ್ರೀಯ ಗ್ರಂಥ ಸಂವಿಧಾನ. ಅಂಬೇಡ್ಕರ್ ಅವರು ತೋರಿದ ದಾರಿಯಲ್ಲಿ ನಮ್ಮ ಸರ್ಕಾರ ಸಾಗುತ್ತದೆ ಎಂದು ನುಡಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಾದ್ಯಂತ ಸಂವಿಧಾನ ಆಚರಣೆಗೆ ಆದೇಶ ಮಾಡಬೇಕು. ಆ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಲಿಖಿತ ಗ್ರಂಥವಲ್ಲ; ಜೀವಂತ ಗ್ರಂಥ. ಅಂಬೇಡ್ಕರ್ ಕೊಟ್ಟ ಸಂವಿಧಾನ ಧರ್ಮ ಗ್ರಂಥಗಳಿಗಿಂತ ಮಿಗಿಲಾದದ್ದು. ಸಂವಿಧಾನ ರಕ್ಷಿಸಿದರೆ ಮಾತ್ರ ನಾವೆಲ್ಲರು ಸುರಕ್ಷಿತ. ಮೀಸಲಾತಿ ಭಿಕ್ಷೆಯಲ್ಲ,ಸಂವಿಧಾನ ಕೊಟ್ಟ ಹಕ್ಕು. ಸಂವಿಧಾನದ ಆಶಯದಂತೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತದೆ ಎಂದರು.
ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಜೆನ್ ಝಿ ಪೀಳಿಗೆ ಸಂವಿಧಾನ ನಮ್ಮ ಭವಿಷ್ಯ ಎಂಬುದನ್ನು ಅರಿತುಕೊಂಡಿದ್ದು, ಮುಂದೆ ಸಂವಿಧಾನ ಪರಿಪೂರ್ಣವಾಗಿ ಜಾರಿಗೆ ಬರಲಿದೆ ಎಂಬ ವಿಶ್ವಾಸ ಮೂಡಿದೆ ಎಂದರು.
ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಮಾತನಾದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವವರಾದ ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಯು.ಟಿ. ಖಾದರ್, ಬಾಲಕೃಷ್ಣ, ಪುಟ್ಟರಂಗಶೆಟ್ಟಿ, ಶಿವಲಿಂಗೇಗೌಡ, ರಿಝ್ವಾ ಅರ್ಷದ್, ರಘುಮೂರ್ತಿ, ಬಸವಂತಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ, ಸಂಸದರಾದ ಸುನೀಲ್ ಬೋಸ್, ಶ್ರೇಯಸ್ ಪಟೇಲ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷೆ ಡಾ.ಪುಷ್ಪಅಮರನಾಥ್, ಶಾಸಕರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಎ.ಎಸ್.ಪೊನ್ನಣ್ಣ, ಮಂತರ್ ಗೌಡ, ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಡಿ ರವಿಶಂಕರ್, ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಎಂ.ಕೆ. ಸೋಮಶೇಖರ್, ಎಂ.ಲಕ್ಷ್ಮಣ್, ಎಚ್.ವಿ. ರಾಜೀವ್, ಬಿರೀಹುಂಡಿ ಬಸವಣ್ಣ ಇದ್ದರು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸ್ವಾಗತಿಸಿದರು. ಡಾ.ಮಧುಸೂದನ್ ಮತ್ತು ತಂಡ ನಾಡಗೀತೆ ಹಾಡಿದರು.
ಸಂವಿಧಾನ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧರಾಗಿದ್ದೇವೆ : ಸಿದ್ದರಾಮಯ್ಯ
ಸಂವಿಧಾನಕ್ಕೆ ಆಪತ್ತು ಎದುರಾದರೆ ರಕ್ತಪಾತವಾಗುತ್ತದೆಂದು ಸಂವಿಧಾನದ ವಿರೋಧಿಗಳಿಗೆ ಗೊತ್ತಿದೆ. ಸಂವಿಧಾನ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂವಿಧಾನ ಅಂಗೀಕಾರದ ಸಂದರ್ಭದಲ್ಲಿ ಮನುವಾದಿಗಳು ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಎಂದು ಟೀಕೆ ಮಾಡಿದ್ದರು. ಈಗ ಬಿಜೆಪಿಯವರು ಸಂವಿಧಾನದ ಪರ ಮಾತಾಡುತ್ತಿದ್ದಾರೆ. ಕೇಂದ್ರದ ಮಂತ್ರಿಯೊಬ್ಬರು ಸಂವಿಧಾನ ಬದಲಾಯಿಸಲು ನಾವು ಬಂದಿರುವುದು ಎಂದು ಬಹಿರಂಗವಾಗಿ ಹೇಳಿದ್ದರು. ಮನುವಾದಿಗಳು ಮೊದಲಿಂದಲೂ ಸಂವಿಧಾನದ ವಿರುದ್ಧ ಇದ್ದಾರೆ ಎಂದು ತಿಳಿಸಿದರು.
ಎಷ್ಟೇ ಶ್ರೇಷ್ಠವಾದ ಸಂವಿಧಾನವಿದ್ದರೂ ಅದನ್ನು ಜಾರಿಗೊಳಿಸುವವರ ಮನೋಭಾವ ಮತ್ತು ಕಾರ್ಯವೈಖರಿ ಮುಖ್ಯವಾಗುತ್ತದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಬದ್ಧತೆ ಇಲ್ಲದಿದ್ದರೆ ಉತ್ತಮ ಸಂವಿಧಾನದಿಂದಲೂ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಸಂವಿಧಾನ ನಡಿಗೆ; ಜೈಭೀಮ್ ಘೋಷಣೆ
ಸಂವಿಧಾನ ಸಮಾವೇಶದ ಭಾಗವಾಗಿ ನಡೆದ ಸಂವಿಧಾನ ನಡಿಗೆ ಆಕರ್ಷಿಸಿತು. ಗನ್‌ಹೌಸ್ ವೃತ್ತದಿಂದ ಆರಂಭವಾದ ಮೆರವಣಿಗೆಯೂ ಚಾಮರಾಜ ಜೋಡಿ ರಸ್ತೆ ಮಾರ್ಗವಾಗಿ ಮಹಾರಾಜ ಕಾಲೇಜು ಮೈದಾನ ತಲುಪಿತು.
ನಡಿಗೆಯಲ್ಲಿ ನೀಲಿ ಶಾಲು ಧರಿಸಿ ಪಾಲ್ಗೊಂಡಿದ್ದ ಸಹಸ್ರಾರು ಜನರು ಜೈ ಸಂವಿಧಾನ, ಜೈ ಭೀಮ್ ಘೋಷಣೆ ಕೂಗಿದರು. ಕಲಾತಂಡಗಳು, ಸಂವಿಧಾನದ ಪೀಠಿಕೆ, ಬಾಬಾ ಸಾಹೇಬರ ಪ್ರತಿಮೆಯುಳ್ಳ ಸ್ತಬ್ಧಚಿತ್ರಗಳು ಗಮನಸೆಳೆಯಿತು.






