‘ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರು ಮಾಡದ ರಾಜ್ಯ ಸರಕಾರ’ : ಸಿಎಂ ಡಿ.ಕೆ.ಶಿವಕುಮಾರ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರ

ಡಿ.ಕೆ.ಶಿವಕುಮಾರ್/ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' ಸ್ಥಾಪಿಸಲು ಕರ್ನಾಟಕ ಸರಕಾರದಿಂದ ಹತ್ತು ತಿಂಗಳಿನಿಂದ ಭೂಮಿ ಮಂಜೂರಾತಿ ವಿಳಂಬಕ್ಕೆ ಆಕ್ಷೇಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿದ್ದಾರೆ.
ಕೈಗಾರಿಕೆ ಸ್ಥಾಪನೆ ಕುರಿತಂತೆ ನಡೆದಿರುವ ಸಭೆಗಳು, ರಾಜ್ಯ ಮತ್ತು ಕೇಂದ್ರ ನಡುವೆ ಆಗಿರುವ ಪತ್ರ ವ್ಯವಹಾರಗಳು, ವಿವಿಧ ಸಭೆಗಳ ನಡಾವಳಿಗಳು ಹಾಗೂ ಇನ್ನಿತರ ಮಹತ್ವದ ದಾಖಲೆಗಳನ್ನು ಲಗತ್ತಿಸಿ ಮುಖ್ಯಮಂತ್ರಿ ಕಚೇರಿಗೆ ಪತ್ರವನ್ನು ಕಳುಹಿಸಿದ್ದಾರೆ. ಅಲ್ಲದೆ ಮಂಡ್ಯದಲ್ಲಿ ಎಆರ್ ಎಐ ಕೇಂದ್ರ ಸ್ಥಾಪನೆ ಕುರಿತು ಕೋರಲಾಗಿರುವ ಭೂ ಮಂಜೂರಾತಿಗೆ ಸಂಬಂಧಿಸಿದ ಸಿಎಂ ನೀಡಿರುವ ಹೇಳಿಕೆಗಳ ತುಣುಕುಗಳನ್ನು ಪತ್ರಕ್ಕೆ ಲಗತ್ತಿಸಿ ರವಾನಿಸಿದ್ದಾರೆ.
ಪತ್ರದ ಸಾರಾಂಶ: ‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ'ವತಿಯಿಂದ ಪ್ರಸ್ತಾಪಿಸಲಾಗಿರುವ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' ಸ್ಥಾಪನೆಗಾಗಿ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡುವಲ್ಲಿ ರಾಜ್ಯ ಸರಕಾರದಿಂದ 10 ತಿಂಗಳಿನಿಂದ ಉಂಟಾಗಿರುವ ನಿರಂತರ ವಿಳಂಬದತ್ತ ನಾನು ತಮ್ಮ ಗಮನ ಸೆಳೆಯಲು ಬಯಸುತ್ತೇನೆ.
10 ತಿಂಗಳುಗಳಿಂದ ನಾವು ನಿರಂತರವಾಗಿ ಈ ಬಗ್ಗೆ ರಾಜ್ಯ ಸರಕಾರದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ. ಸ್ಥಳ ಪರಿಶೀಲನೆ, ತಾಂತ್ರಿಕ ಮೌಲ್ಯಮಾಪನ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಈ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದೇವೆ. ಇಷ್ಟೆ ಲ್ಲಾ ನಿರಂತರ ಪ್ರಯತ್ನಗಳ ಹೊರತಾಗಿಯೂ, ಸೂಕ್ತ ಭೂಮಿಯನ್ನು ಮಂಜೂರು ಮಾಡುವ ವಿಷಯವು ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಇನ್ನೂ ಭೂಮಿ ಮಂಜೂರಾತಿ ಇತ್ಯರ್ಥಗೊಂಡಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.
ಆದುದರಿಂದ, ಮೇಲ್ಕಂಡ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿ ಹಾಗೂ ಯುವ ಸಮೂಹಕ್ಕೆ ಉದ್ಯೋಗ ಸೃಜಿಸುವ ದೃಷ್ಟಿಯಿಂದ, ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಆಶ್ವಾಸನೆ ನೀಡುವ ಬದಲು ತಾವು ರಾಜ್ಯ ಸರಕಾರದಿಂದ ಮಂಡ್ಯ ಜಿಲ್ಲೆಯಲ್ಲಿ ಎಆರ್ ಎಐ ಕೇಂದ್ರಕ್ಕೆ ಅಗತ್ಯವಿರುವ ಭೂಮಿಯನ್ನು ಮಂಜೂರು ಮಾಡಬೇಕೆಂದು ಕೋರುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.






