ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ, ಪರಿಹಾರ ನೀಡುತ್ತೇವೆ, ಪ್ರತಿಭಟನೆ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಮತ್ತೆ ಮನವಿ

ಬೆಂಗಳೂರು : "ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ನಾವು ಅದಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ. ಇಂದು ಸಂಜೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ನಮ್ಮ ಮೇಲೆ ನಂಬಿಕೆಯನ್ನಿಡಿ. ನಾಡಿನ ಮುಖ್ಯಮಂತ್ರಿಯಾಗಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ತಾಯಂದಿರಿಗೆ ನಮ್ರತೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರತಿಭಟನೆ ಹಿಂತೆಗೆದುಕೊಳ್ಳಿ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರಿಗೆ ಮತ್ತೊಮ್ಮೆ ಮನವಿ ಮಾಡಿದರು.
ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
"ನಾವು ನಿಮ್ಮ ಪರವಾಗಿದ್ದೇವೆ. ಸರ್ಕಾರವನ್ನು ಹೆದರಿಸಬೇಡಿ. ಆಶಾ ಕಾರ್ಯಕರ್ತೆಯರು ಮೊದಲು ಪ್ರತಿಷ್ಠೆಯನ್ನು ಬಿಡಬೇಕು. ಬೇರೆಯವರು ನಿಮ್ಮನ್ನು ತಮ್ಮ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ. ಇದರಲ್ಲಿ ಬಹಳ ಗಂಭೀರ ವಿಚಾರಗಳೂ ಇವೆ. ಆಶಾಕಾರ್ಯಕರ್ತರು ಒಬ್ಬರೆ ಅಲ್ಲ, ಈ ರೀತಿ ಪ್ರತಿಭಟನೆ ಮಾಡಲು ಹಲವು ಮಂದಿ ಸಿದ್ಧರಾಗುತ್ತಿದ್ದಾರೆ" ಎಂದರು.
ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಯಾಕೆ?
"ಕೇಂದ್ರ ಸರ್ಕಾರವನ್ನು ಏಕೆ ಈ ರೀತಿ ಒತ್ತಾಯ ಮಾಡುತ್ತಿಲ್ಲ? ಪ್ರತಿಭಟನೆ ಸ್ಥಳಕ್ಕೆ ಹೋಗಿ ಬಂದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ? ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಈಗಾಗಲೇ ಕೊಟ್ಟಿದ್ದೇವೆ. ಈಗಲೂ ಸಮಸ್ಯೆಗೆ ಪರಿಹಾರವನ್ನು ಕೊಡುತ್ತೇವೆ" ಎಂದು ಹೇಳಿದರು.
ಆಶಾ ಕಾರ್ಯಕರ್ತರು ಇಲ್ಲದೆ ಇದ್ದರು ನಡೆಯುತ್ತದೆ ಎಂಬ ಆರೋಗ್ಯ ಸಚಿವರ ಹೇಳಿಕೆಯ ಬಗ್ಗೆ ಕೇಳಿದಾಗ, "ಇಲ್ಲ ಅದೆಲ್ಲಾ ಸುಳ್ಳು. ನಮಗೆ ಎಲ್ಲರೂ ಬೇಕು. ನರೇಂದ್ರಸ್ವಾಮಿ ಅವರ ಹೇಳಿಕೆಯನ್ನು ತಿರುಚಿದ್ದಾರೆ" ಎಂದು ಹೇಳಿದರು.
ಆನೆಗಳ ನಿಯಂತ್ರಣ ಸುಲಭವಲ್ಲ
ಆನೆಗಳ ಸಂಘರ್ಷದ ಬಗ್ಗೆ ಕೇಳಿದಾಗ, "ಆನೆಗಳನ್ನು ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲ. ಅದು ಸುಲಭದ ಕೆಲಸವೂ ಅಲ್ಲ. ನಮ್ಮ ಮನೆ ಪಕ್ಕದಲ್ಲೇ 550 ಆನೆಗಳು ಹಾದು ಹೋಗಿವೆ. ಚಿಕ್ಕಮಗಳೂರು ಶಾಸಕರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ. ಆದರೆ ಗಡಿಗಳಲ್ಲಿ ಅಷ್ಟು ದೊಡ್ಡ ಆನೆ ಹಿಂಡನ್ನು ಕಳಿಸುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಚಿಕ್ಕಮಗಳೂರನ್ನು, ಹಾಸವನ್ನೂ ನಾವು ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಪ್ಲಾಂಟೇಷನ್ ಗಳು ಇವೆ" ಎಂದರು.
ಕ್ಲೀನ್ ಚಿಟ್ ಸಿಕ್ಕಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಮತ್ತೊಮ್ಮೆ ಕ್ಯಾಬಿನೆಟ್ ಗೆ ಸೇರಿಸಿಕೊಳ್ಳುತ್ತೀರ ಎನ್ನುವ ಪ್ರಶ್ನೆಗೆ, "ಈ ಬಗ್ಗೆ ಪತ್ರಿಕೆಗಳಲ್ಲಿ ಮಾತ್ರ ಓದಿದ್ದೇನೆ. ನಾನು ಯಾವುದೇ ತನಿಖೆಗೆ ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.
ಸಂವಿಧಾನ ಉಳಿಸುವುದು ನಮ್ಮ ಜವಾಬ್ದಾರಿ
"ಭಾರತದ ಪ್ರತಿಯೊಬ್ಬ ಪ್ರಜೆಗೆ ಬೆಳಕನ್ನು ನೀಡಿದ ಮಹಾನ್ ಚೇತನ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ದಿನದಂದು ನಾವು ಸ್ಮರಿಸಬೇಕು. ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದಾಗ ಮಾಡಿದ ಮೊದಲ ಕೆಲಸ, ರೆಹಮಾನ್ ಖಾನ್ ಅವರ ಕೈಯಲ್ಲಿ, ಸಂವಿಧಾನದ ಪೀಠಿಕೆ ಓದಿಸಿ ಅಲ್ಲಿಂದಲೇ ಸಂವಿಧಾನ ಮಹತ್ವವನ್ನು ಸಾರುವ ಕೆಲಸ ಪ್ರಾರಂಭ ಮಾಡಿದ್ದೇನೆ. ಹಿಂದೆ ಮಹದೇವಪ್ಪನವರು ಬಹಳ ಜವಾಬ್ದಾರಿಯಿಂದ ಸಂವಿಧಾನದ ಆಶಯಗಳು ಪ್ರತಿ ಮಕ್ಕಳಿಗೂ, ಜನರಿಗೂ ತಲುಪಿಸುವ ಕೆಲಸ ಮಾಡಿದ್ದರು. ಈಗ ಮುನಿಯಪ್ಪನವರು ಆ ಕೆಲಸ ಕಾಳಜಿಯಿಂದ ಮಾಡುತ್ತಿದ್ದಾರೆ" ಎಂದರು.
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಶಾಲಾ- ಕಾಲೇಜುಗಳಲ್ಲಿ ಮತ್ತು ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಓದಲು ಆದೇಶ ನೀಡಲಾಯಿತು. ಸಂವಿಧಾನದ ಉಳಿಸಿಕೊಂಡರೆ ಮಾತ್ರ ಬದುಕಲು ಸಾಧ್ಯ ಎಂಬ ತಿಳುವಳಿಕೆ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ" ಎಂದರು.






