ಬಿಹಾರ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಚಟುವಟಿಕೆಗಳು; ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಸೂಚನೆ

ರಾಹುಲ್ ಗಾಂಧಿ/ಸಿದ್ದರಾಮಯ್ಯ (PC : PTI)
ಬೆಂಗಳೂರು : ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ‘ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ನವೆಂಬರ್ ಕಾಂತ್ರಿ ಸಂಭವಿಸಲಿದೆ’ ಎಂದು ಹೇಳಲಾಗುತ್ತಿತ್ತು. ಆದರೆ, ‘ನಾಯಕತ್ವ ಬದಲಾವಣೆ’ ಬದಲಿಗೆ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ.
ಬಿಹಾರ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಗೆ ದೌಡಾಯಿಸಿದ್ದು, ಲೋಕಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸಚಿವ ಸಂಪುಟ ಪುನರ್ ರಚನೆಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸಂಪುಟದ 15ರಿಂದ 18 ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ‘ಪಟ್ಟಿಯನ್ನು ಸಿದ್ದಪಡಿಸಿಕೊಂಡು ಬನ್ನಿ’ ಎಂದು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯನವರಿಗೆ ಸೂಚಿಸಿದ್ದಾರೆ. ಅಲ್ಲದೆ, ಈ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಚರ್ಚಿಸಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರವಿವಾರ ಬೆಳಗಿನ ಜಾವ ಬೆಂಗಳೂರು ನಗರಕ್ಕೆ ಹಿಂದಿರುಗಲಿದ್ದು, ನ.17ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಖುದ್ದು ಭೇಟಿಯಾಗಿ ಸಂಪುಟ ಪುನರ್ ರಚನೆ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ 15 ರಿಂದ 18 ಮಂದಿ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಯಾರನ್ನು ಕೈಬಿಡಲಿದ್ದಾರೆ ಮತ್ತು ಸಂಪುಟಕ್ಕೆ ಹೊಸದಾಗಿ ಯಾರನ್ನು ಸೇರಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದ್ದು, ಹೊಸದಿಲ್ಲಿ ಮಟ್ಟದಲ್ಲಿ ಈಗಾಗಲೇ ಲಾಬಿಯೂ ಆರಂಭವಾಗಿದೆ.
ಹಿರಿಯ ಶಾಸಕರಾದ ಬಿ.ಕೆ.ಹರಿಪ್ರಸಾದ್, ಶಿವಲಿಂಗೇಗೌಡ, ಪಿ.ಎಂ.ನರೇಂದ್ರ ಸ್ವಾಮಿ, ಎಂ.ಕೃಷ್ಣಪ್ಪ, ಎನ್.ಎ. ಹಾರಿಸ್, ಸಲೀಂ ಅಹಮದ್, ಬಿ.ನಾಗೇಂದ್ರ, ಬಿ.ಕೆ.ಸಂಗಮೇಶ್, ಮಾಗಡಿ ಬಾಲಕೃಷ್ಣ, ಲಕ್ಷ್ಮಣ್ ಸವದಿ, ಎ.ಎಸ್.ಪೊನ್ನಣ್ಣ, ಶರತ್ ಬಚ್ಚೆಗೌಡ, ರಿಝ್ವಾನ್ ಅರ್ಶದ್, ರೂಪಕಲಾ ಶಶಿಧರ್, ನಂಜೇಗೌಡ, ನಾರಾಯಣಸ್ವಾಮಿ, ಬೇಳೂರು ಗೋಪಾಲಕೃಷ್ಣ ಸಹಿತ ಇನ್ನಿತರರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಸಂಪುಟ ಪುನರ್ ರಚನೆ ವೇಳೆ ಯಾರನ್ನು ಕೈಬಿಡಲಿದ್ದಾರೆ ಹಾಗೂ ಯಾರಿಗೆಲ್ಲ ಅವಕಾಶ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.







