ಸಿಎಂ ಸಿದ್ದರಾಮಯ್ಯರ 77ನೇ ಜನ್ಮದಿನಕ್ಕೆ ಕನ್ನಡದಲ್ಲಿ ಶುಭ ಕೋರಿದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್
ತಮಿಳಿನಲ್ಲಿ ಧನ್ಯವಾದ ಸಲ್ಲಿಸಿದ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ(ಆ.3) ತಮ್ಮ 77ನೇ ಜನ್ಮದಿನ ಆಚರಿಸಿಕೊಂಡಿದ್ದು, ನಾಡಿನ ವಿವಿಧ ಗಣ್ಯರು ಅವರಿಗೆ ಶುಭ ಹಾರೈಸಿದ್ದಾರೆ. ಈ ಪೈಕಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡಾ ಸಿದ್ದರಾಮಯ್ಯನವರಿಗೆ ಶುಭ ಹಾರೈಸಿದ್ದು, ಅವರ ಕನ್ನಡದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ.
“ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ತಿರು. ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಭಾಷಾ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಮುನ್ನಡೆಸುವಲ್ಲಿ ನಿಮ್ಮ ಬಲವಾದ ಧ್ವನಿಯು ನಿಜವಾದ ಒಕ್ಕೂಟ ಮತ್ತು ಅಂತರ್ಗತ ಪ್ರಜಾಪ್ರಭುತ್ವದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಈ ಮೌಲ್ಯಗಳು ಇಂದಿನ ಭಾರತದಲ್ಲಿ ಅಪಾರ ಮಹತ್ವವನ್ನು ಹೊಂದಿವೆ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಜನರು ಅವುಗಳನ್ನು ಎತ್ತಿ ಹಿಡಿಯುವಲ್ಲಿ ಒಟ್ಟಾಗಿ ನಿಲ್ಲುವರು” ಎಂದು ಎಂ.ಕೆ.ಸ್ಟಾಲಿನ್ ಕನ್ನಡದಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.
ಈ ಶುಭ ಹಾರೈಕೆಗೆ ಪ್ರತಿಯಾಗಿ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದು, ತಮಿಳು ಭಾಷೆಯ ಪ್ರತಿಕ್ರಿಯೆ ಕೂಡಾ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರರ ಭಾಷೆಗಳಲ್ಲಿ ಶುಭ ಹಾರೈಕೆ ಹಾಗೂ ಧನ್ಯವಾದ ಸಲ್ಲಿಸಿರುವುದು ಆರೋಗ್ಯಕರ ಒಕ್ಕೂಟ ವ್ಯವಸ್ಥೆಯೆಡೆಗಿನ ಅವರ ಬದ್ಧತೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿಬಿಂಬವಾಗಿದೆ ಎಂಬ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮ ಬಳಸುವ ಜನರಿಂದ ವ್ಯಕ್ತವಾಗಿವೆ.







