ನರೇಗಾ ಯೋಜನೆ ಅಕ್ರಮ : ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿಎಂ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ನರೇಗಾ ಯೋಜನೆ ಸಂಬಂಧ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ರಾಜ್ಯ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ(ದಿಶಾ) ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ದಿಶಾ ಸಭೆಗಳು ಸೂಕ್ತ ಸಮಯಕ್ಕೆ ನಡೆಯಬೇಕು. ಜತೆಗೆ, ಸಂಸದರೂ ಈ ಬಗ್ಗೆ ಆಸಕ್ತಿ ವಹಿಸಬೇಕು ಎಂದರು.
ಮೂರು ತಿಂಗಳ ಒಳಗೆ ನರೇಗಾ ಕ್ರಿಯಾ ಯೋಜನೆ ಕಡ್ಡಾಯವಾಗಿ ಸಿದ್ದಪಡಿಸಬೇಕು. ಏನೇ ಕಾರಣದಿಂದ ಹಿಂದಿನ ಕ್ರಿಯಾ ಯೋಜನೆ ಆಗಿದ್ದರೆ ಅದನ್ನು ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಸದಸ್ಯರ ಪ್ರಶ್ನೆ: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರದಿಂದ ಬರಬೇಕಾಗಿದ್ದ ಎರಡು ವರ್ಷದ ಪಾಲು 10,000 ಬಾಕಿ ಕೋಟಿಯಷ್ಟು ಬಾಕಿ ಉಳಿದಿದೆ. ಹೀಗೆ ಬಾಕಿ ಉಳಿಸಿಕೊಂಡಿರುವುದರಿಂದ ಬಹಳ ಸಮಸ್ಯೆ ಆಗುತ್ತಿದೆ. 23-24ರ ಸಾಲಿನಲ್ಲಿ 7656 ಕೋಟಿ, 24-2 ರ ಸಾಲಿನಲ್ಲಿ 3233 ಕೋಟಿ ಹಣವನ್ನು ಕೇಂದ್ರ ಜಲಜೀವನ್ ಮಿಷನ್ ಯೋಜನೆಯಲ್ಲಿ ಬಾಕಿ ಉಳಿಸಿಕೊಂಡಿದೆ ಎಂದು ಅಧಿಕಾರಿಗಳು ಪ್ರಸ್ತಾಪಿಸಿದರು.
ಈ ವೇಳೆ ಸಭೆಯಲ್ಲಿದ್ದ ದಿಶಾ ಸಮಿತಿ ಸದಸ್ಯ ರಿಝ್ವಾನ್ ಆರ್ಶದ್, ಏಕೆ ಕೇಂದ್ರ ಸರಕಾರದ ಬಳಿ ಹಣ ಇಲ್ಲವೇ? ಕುಡಿಯುವ ನೀರಿಗೆ ಹಣ ಕೊಡಲಾಗದಷ್ಟು ಕೇಂದ್ರ ದುರ್ಬಲವಾಗಿದೆಯೇ ಎಂದು ಸಂಸದರಿಗೆ ಪ್ರಶ್ನಿಸಿದರು.