ಒಕ್ಕೂಟ ವ್ಯವಸ್ಥೆ ಬಲಪಡಿಸಿ ಎಲ್ಲ ರಾಜ್ಯಗಳಿಗೂ ನ್ಯಾಯ ಒದಗಿಸಲು ಒತ್ತಾಯ : ಸಿಎಂ ಸಿದ್ದರಾಮಯ್ಯ
‘16ನೆ ಹಣಕಾಸು ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಕೆ’

PC: x/@siddaramaiah
ಹೊಸದಿಲ್ಲಿ: 16ನೆ ಹಣಕಾಸು ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಸಲ್ಲಿಸುವುದರ ಜೊತೆಗೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ಹೊಸದಿಲ್ಲಿಯಲ್ಲಿ 16ನೆ ಹಣಕಾಸು ಆಯೋಗದ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಸಲ್ಲಿಸಲಾಗಿದೆ ಎಂದರು.
2011-2012 ರಲ್ಲಿ ಕರ್ನಾಟಕ ರಾಜ್ಯವು ಜಿಡಿಪಿಗೆ ಶೇ.7ರಷ್ಟು ಕೊಡುಗೆ ನೀಡಿದ್ದರೆ, 2024-25 ರಲ್ಲಿ ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್ಟಿ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ ಎರಡನೆ ಸ್ಥಾನದಲ್ಲಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ನಾವು ಶೇ.5ರಷ್ಟಿದ್ದೇವೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಕೇಂದ್ರಕ್ಕೆ ಪ್ರತಿ ವರ್ಷ 4.5 ಲಕ್ಷ ಕೋಟಿ ರೂ.ತೆರಿಗೆ ನೀಡುತ್ತದೆ. ನಾವು ಒಂದು ರೂ. ತೆರಿಗೆ ನೀಡಿದರೆ 15 ಪೈಸೆ ನಮಗೆ ವಾಪಸ್ಸು ಬರುತ್ತದೆ. ಈ ಅನ್ಯಾಯ 16ನೆ ಹಣಕಾಸು ಆಯೋಗದಲ್ಲಿ ಆಗಬಾರದು. 14ನೆ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು ಶೇ.4.713ರಷ್ಟಿತ್ತು. ಆದರೆ, 15ನೆ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲನ್ನು ಶೇ.3.647ಕ್ಕೆ ಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆಯಲ್ಲಿ ನಮಗೆ ಐದು ವರ್ಷಗಳಲ್ಲಿ ಒಟ್ಟು 68,275 ಕೋಟಿ ರೂ.ಗಳು ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಸೆಸ್ ಮತ್ತು ಸರ್ಚಾರ್ಜ್ ಶೇ.5ರಷ್ಟನ್ನು ಮೀರಬಾರದು: ಕೇಂದ್ರ ಸರಕಾರ ಸೆಸ್ ಮತ್ತು ಸರ್ಜಾರ್ಜ್ ನಲ್ಲಿ ನಮಗೆ ಮಾತ್ರವಲ್ಲ ಯಾವ ರಾಜ್ಯಕ್ಕೂ ಪಾಲು ಕೊಡುವುದಿಲ್ಲ. ಕರ್ನಾಟಕದಿಂದ 2024-25ರಲ್ಲಿ ಒಟ್ಟು 5,41,709 ಕೋಟಿ ರೂ. ಸಂಗ್ರಹವಾಗಿದೆ. 8,084 ಕೋಟಿ ರೂ.ಗಳು ಕರ್ನಾಟಕಕ್ಕೆ ನಷ್ಟವಾಗಿದೆ. ಸೆಸ್ ಮತ್ತು ಸರ್ಚಾರ್ಜ್ ಶೇ.5ರಷ್ಟನ್ನು ಮೀರಬಾರದು, ಒಂದು ವೇಳೆ ಶೇ.5ರಷ್ಟು ಮೀರಿದರೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲಿನಲ್ಲಿ ಶೇ.50ರಷ್ಟು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ತೆರಿಗೆ ನ್ಯಾಯಯುತವಾಗಿ ಹಂಚಿಕೆಯಾಗಬೇಕು: ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಯಾದರೆ ಕೇಂದ್ರ ಸರಕಾರದ ಬೆಳವಣಿಗೆಯೂ ಆಗುತ್ತದೆ. ಹಾಗಾಗಿ ನ್ಯಾಯಯುತವಾಗಿ ತೆರಿಗೆ ಹಂಚಿಕೆಯಾಗಬೇಕು. ರಾಜ್ಯದ ತಲಾದಾಯವು ಆರು ಜಿಲ್ಲೆಗಳನ್ನು ಹೊರತುಪಡಿಸಿ ಕಡಿಮೆಯಿದೆ. ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಕಡಿಮೆಯಿದ್ದು, ಇದು ರಾಜಸ್ಥಾನ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಲಕ್ಕೆ ಸರಿಸಮವಾಗಿದೆ ಎಂದು ಅವರು ಹೇಳಿದರು.
ರಾಜಸ್ವ ಕೊರತೆ ಇರುವ ರಾಜ್ಯಗಳಿಗೆ ಈ ಕೊರತೆಯನ್ನು ತುಂಬಲು ಅನುದಾನವನ್ನು ನೀಡಲಾಗುತ್ತದೆ. ಆದರೆ ತೆರಿಗೆ ಹಂಚಿಕೆಯಲ್ಲಿ ನಮ್ಮಷ್ಟೇ ನಷ್ಟವಾಗಿರುವ ಕೇರಳಕ್ಕೆ ಕಳೆದ ವರ್ಷ 38 ಸಾವಿರ ಕೋಟಿ ರೂ.ಗಳನ್ನು ರಾಜಸ್ವ ಕೊರತೆ ತುಂಬಲು ಒದಗಿಸಲಾಗಿದೆ. ಕರ್ನಾಟಕಕ್ಕೆ ಯಾವುದೇ ರಾಜಸ್ವ ಕೊರತೆ ಅನುದಾನ ಬಂದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಶೇಷ ಅನುದಾನ ಒದಗಿಸಲು ಕೇಂದ್ರ ನಕಾರ: 15ನೆ ಹಣಕಾಸಿನ ಆಯೋಗವು 5495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಒದಗಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು ಎಂದು ಮುಖ್ಯಮಂತ್ರಿ ಹೇಳಿದರು.
ಇದಲ್ಲದೇ ಪೆರಿಫೆರಲ್ ರಿಂಗ್ ರಸ್ತೆಗೆ 3 ಸಾವಿರ ಕೋಟಿ ರೂ. ಹಾಗೂ ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಎರಡೂ ಸೇರಿ 11,495 ಕೋಟಿ ರೂ.ಗಳನ್ನು ಒದಗಿಸಬೇಕೆಂದು 15ನೆ ಹಣಕಾಸಿನ ಆಯೋಗವು ಶಿಫಾರಸ್ಸು ಮಾಡಿತ್ತು ಎಂದು ಮುಖ್ಯಮಂತ್ರಿ ವಿವರಿಸಿದರು.
ಬೆಂಗಳೂರು ಅಭಿವೃದ್ಧಿಗೆ 1.15 ಲಕ್ಷ ಕೋಟಿ ರೂ.ಒದಗಿಸಲು ಮನವಿ: ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ನಮ್ಮ ಮನವಿಯಲ್ಲಿ ಕೋರಿರುವಂತೆ ಅನುದಾನವನ್ನು ಒದಗಿಸದೇ ಹೋದರೆ ಬೆಂಗಳೂರು ಅಭಿವೃದ್ಧಿಗೆ 1.15 ಲಕ್ಷ ಕೋಟಿ ರೂ.ಗಳನ್ನು ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಲ್ಯಾಣ ಕರ್ನಾಟಕ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು 5 ಜಿಲ್ಲೆಗಳ ವಾರ್ಷಿಕ ವರಮಾನವು ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಲದ ಸರಿಸಮಾನವಿದೆ. ಮಲೆನಾಡು ಪ್ರದೇಶಗಳಲ್ಲಿ ನಮಗೆ ಪ್ರವಾಹ, ಭೂ ಕುಸಿತದಂತಹ ಸಮಸ್ಯೆಗಳು ತಲೆದೋರುತ್ತವೆ. ಆದುದರಿಂದ, ವಿಶೇಷ ಅನುದಾನ ಒದಗಿಸಬೇಕು ಎಂದು ಕೋರಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ವಿವೇಚನಾ ಅನುದಾನವು ಶೇ.0.3ಗಿಂತ ಹೆಚ್ಚಾಗಬಾರದು ಎಂದು ಮನವಿ ಮಾಡಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮೂರು ಮಾನದಂಡಗಳ ಪ್ರಕಾರ ಕರ್ನಾಟಕ ನಡೆದುಕೊಂಡಿದೆ. ಹಾಗಾಗಿ ಆರ್ಥಿಕವಾಗಿ ರಾಜ್ಯ ಸದೃಢವಾಗಿದೆ ಎಂದು ಆಯೋಗದ ಗಮನಕ್ಕೆ ತರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಆಗಬೇಕು: ಕೇರಳ, ತಮಿಳುನಾಡಿಗೂ ನಮ್ಮಷ್ಟೇ ನಷ್ಟವಾಗಿದ್ದರೂ, ಅವರಿಗೆ ರಾಜಸ್ವ ಕೊರತೆ ಅನುದಾನವನ್ನು ನೀಡಲಾಗಿದೆ. ನಮಗೇಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಬಾರದು ಎಂದು ನಾವು ಹೇಳುವುದಿಲ್ಲ. ಆದರೆ ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಮಾಡಬೇಕು ಎಂದು ಕೋರಲಾಗಿದೆ ಎಂದು ಅವರು ತಿಳಿಸಿದರು.







