ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಲು ಸಚಿವ ಸಂಪುಟದಲ್ಲಿ ಚರ್ಚೆ : ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ
ಬೆಂಗಳೂರು : ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಇಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ಇಲ್ಲಿನ ವಸಂತನಗರದ ಕೊಡವ ಸಭಾಂಗಣದಲ್ಲಿ ‘ರಾಜ್ಯ ಸರಕಾರ ಬೆಂಗಳೂರಿನಲ್ಲಿ ಏಳು ಎಕರೆ ಭೂಮಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕೊಡವ ಸಮಾಜ’ವು ಏರ್ಪಡಿಸಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ, ಸೈನ್ಯಕ್ಕೆ, ಕ್ರೀಡೆಗೆ, ರಾಜಕಾರಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೊಡವರು ಜಾತಿ-ಧರ್ಮ ಮಾಡುವವರಲ್ಲ ಎಂದು ಅವರು ತಿಳಿಸಿದರು.
ಯಾವುದೇ ಸಮುದಾಯಗಳು ಜಾಗ ಕೇಳಿದರೂ ಗೈಡೆನ್ಸ್ ಬೆಲೆಯಲ್ಲಿ ಶೇ.10ರಷ್ಟು ಬೆಲೆಗೆ ಕೊಡಬೇಕು ಎಂದು ಕಂದಾಯ ಸಚಿವರಿಗೆ ಸೂಚಿಸಿದ್ದೇನೆ. ಅದರಂತೆ ಕೊಡವ ಸಮಾಜಕ್ಕೂ ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸರ್ವರನ್ನು ಸಮಾನವಾಗಿ ಕಾಣುವುದೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ. ಎಲ್ಲ ಜಾತಿ, ಎಲ್ಲ ಧರ್ಮದವರನ್ನೂ ಭಾರತೀಯರು, ಭಾರತೀಯ ಪ್ರಜೆಗಳು ಎಂದು ಕಾಂಗ್ರೆಸ್ ಪಕ್ಷ ಪರಿಗಣಿಸುತ್ತದೆ. ಜಾತಿ ಇರಲಿ, ಧರ್ಮ ಇರಲಿ ಅದೆಲ್ಲಾ ಮನೆಯೊಳಿಗಿನ ಆಚರಣೆಯಾಗಬೇಕು. ಹೊರಗೆ ಬಂದ ಕೂಡಲೇ ನಾವೆಲ್ಲರೂ ಒಂದೇ, ನಾವು ಭಾರತೀಯರಾಗಬೇಕು ಎಂದು ಅವರು ಕರೆ ನೀಡಿದರು.
ಪೊನ್ನಣ್ಣ ಅವರಿಗೆ ಉತ್ತಮ ಭವಿಷ್ಯವಿದ್ದು, ಕೊಡವ ಸಮಾಜ ಅವರನ್ನು ಬೆಂಬಲಿಸಿದರೆ, ಅವರು ರಾಜ್ಯದ ಆಸ್ತಿ ಆಗುತ್ತಾರೆ. ಎ.ಕೆ.ಸುಬ್ಬಯ್ಯ ಮತ್ತು ಎಂ.ಸಿ.ನಾಣಯ್ಯ ಉತ್ತಮ ಸಂಸದೀಯ ಪಟುಗಳಾಗಿದ್ದರು. ಇವರು ಸದನದಲ್ಲಿ ಸಮಾಜಮುಖಿಯಾಗಿ ಮಾತನಾಡಿದ ಫೈರ್ ಬ್ರಾಂಡ್ಗಳಾಗಿದ್ದರು. ಪೊನ್ನಣ್ಣ ಅವರಿಗೂ ಫೈರ್ ಬ್ರಾಂಡ್ ಆಗುವ ಎಲ್ಲ ಲಕ್ಷಣಗಳೂ ಇವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಕೃಷ್ಣಬೈರೇಗೌಡ, ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಪೊನ್ನಣ್ಣ ಹಾಗೂ ಶಾಸಕರಾದ ಮಂಥರ್ ಗೌಡ, ರಿಝ್ವಾನ್ ಅರ್ಶದ್, ಕೊಡವ ಸಮಾಜದ ಅಧ್ಯಕ್ಷ ಕೆ.ಟಿ.ಪೆಮ್ಮಯ್ಯ, ಉಪಾಧ್ಯಕ್ಷ ಪಿ.ಕೆ. ಮುತ್ತಪ್ಪ ಮತ್ತಿತರರು ಭಾಗವಹಿಸಿದ್ದರು.







