ಸಚಿವ ಸಂಪುಟ ಪುನರ್ ರಚನೆ ಇಲ್ಲ, ನಾಯಕತ್ವ ಬದಲಾವಣೆಯೂ ಇಲ್ಲ : ಸಿಎಂ ಸಿದ್ದರಾಮಯ್ಯ
"2028ರ ಚುನಾವಣೆಗೆ ನನ್ನದೇ ನಾಯಕತ್ವ"

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : "ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬಹಳ ಸ್ಪಷ್ಟವಾಗಿ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ. ಅವರೇ ಹೇಳಿದ ಮೇಲೆ ಊಹೆ ಯಾಕೆ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗುರುವಾರ ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ʼಊಹೆ ಮಾಡುತ್ತಿರುವುದು ಮಾಧ್ಯಮಗಳು. ಪಕ್ಷದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿಲ್ಲ. ಹೈಕಮಾಂಡ್ ನಮ್ಮ ತಿರ್ಮಾನಕ್ಕೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ. ನಾವು ಇದಕ್ಕೆ ಒಪ್ಪಿಕೊಂಡಿದ್ದೇವೆʼ ಎಂದು ಸ್ಪಷ್ಟಪಡಿಸಿದರು.
ಎರಡೂವರೆ ವರ್ಷ ಆಗುವ ಮುನ್ನ ಚರ್ಚೆ ಸಹಜ. ಅದಕ್ಕಾಗಿ ನಾನೇ ಐದು ವರ್ಷ ಸಿಎಂ ಎಂದು ಹೇಳಿದ್ದೇನೆ. ಗಾಳಿ ಸುದ್ದಿ ಯಾಕೆ. ಕೆಲವು ಬೆಂಬಲಿಗ ಶಾಸಕರು ಅಭಿಮಾನಕ್ಕೆ ಹೇಳಬೇಕು ಹೇಳುತ್ತಾರೆ ಎಂದು ಡಿಕೆಶಿ ಮುಂದಿನ ಸಿಎಂ ಎಂಬ ಹೇಳಿಕೆಗೆ ಪರೋಕ್ಷ ತಿರುಗೇಟು ನೀಡಿದರು.
ಸೆಪ್ಟೆಂಬರ್ ಕ್ರಾಂತಿ ಎಂದರೆ ಏನು?. ಕ್ರಾಂತಿ ಅಂದರೆ ಬದಲಾವಣೆಯೇ?. ಬದಲಾವಣೆ ಬಗ್ಗೆ ಖರ್ಗೆ, ರಾಹುಲ್ ಗಾಂಧಿ ವೇಣುಗೋಪಾಲ್ ಅವರು ಹೇಳಬೇಕು. ಸುರ್ಜೆವಾಲ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕಿಂತ ಏನು ಹೇಳಬೇಕು. ರಾಹುಲ್ಗಾಂಧಿ ಭೇಟಿಯಾಗಲ್ಲ. ಅವರು ಚರ್ಚೆಗೆ ಕರೆದಿಲ್ಲ ಎಂದು ಇದೇ ವೇಳೆ ತಿಳಿಸಿದರು.
ನನ್ನದೇ ನಾಯಕತ್ವ :ಸಚಿವ ಸಂಪುಟ ಪುನರ್ ರಚನೆ ಇಲ್ಲ, ನಾಯಕತ್ವ ಬದಲಾವಣೆಯೂ ಇಲ್ಲ. 2028ರ ಚುನಾವಣೆಗೆ ನನ್ನದೇ ನಾಯಕತ್ವದಲ್ಲಿ ಹೋಗಲಿದ್ದೇವೆ ಎಂದು ಹೇಳಿದರು.
ಅಧಿಕಾರ ಹಸ್ತಾಂತರದ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ: ಅಧಿಕಾರ ಹಸ್ತಾಂತರ ವಿಷಯದ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹಮತಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದು, ವರಿಷ್ಠರ ತೀರ್ಮಾನಕ್ಕೆ ತಲೆಬಾಗುವುದಾಗಿ ನಾವಿಬ್ಬರೂ ಹಲವು ಬಾರಿ ತಿಳಿಸಿದ್ದೇವೆ. ಸರಕಾರಕ್ಕೆ ಎರಡೂವರೆ ವರ್ಷವಾಗಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ವಿಷಯವೇಳುವುದು ಸಹಜ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ ಎಂದು ಅವರು ಪುನರುಚ್ಚರಿಸಿದರು.
ಇತ್ತೀಚೆಗಷ್ಟೇ ‘ಐದು ವರ್ಷವೂ ನಾನೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದೇನೆ’ ಎಂದು ಸ್ಪಷ್ಟಪಡಿಸಿದ ಮೇಲೆ ಮಾಧ್ಯಮಗಳಲ್ಲಿ ಇಂತಹ ಗಾಳಿಸುದ್ದಿಗಳು ಏಕೆ ಹಬ್ಬಿಸಲಾಗುತ್ತಿದೆ ಎಂದು ಮರು ಪ್ರಶ್ನಿಸಿದ ಅವರು, ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲವೆಂದು ತಿಳಿಸಿದ್ದಾರೆ ಎಂದರು.
ಜನೌಷಧಿ ಕೇಂದ್ರ ಬಂದ್-ಮಾಹಿತಿ ಪಡೆದು ಪ್ರತಿಕ್ರಿಯೆ: ಸರಕಾರಿ ಆಸ್ಪತ್ರೆಯೊಂದರಲ್ಲಿ ಜನೌಷಧಿ ಕೇಂದ್ರ ಬಂದ್ ಮಾಡಿರುವ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಲಾಗುವುದು ಎಂದರು.
ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ: ಸಿಬಿಎಸ್ಸಿ ಕನ್ನಡ ಪತ್ರಿಕೆಯನ್ನು 125 ಅಂಕಗಳಿಂದ 100ಕ್ಕೆ ಇಳಿಸುವ ಪ್ರಸ್ತಾವ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದರಾಮಯ್ಯ, ಈ ವಿಷಯ ಸಚಿವ ಸಂಪುಟದಲ್ಲಿ ಮಂಡನೆಯೂ ಆಗಿಲ್ಲ, ಚರ್ಚೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬರುವುದು ಹಗಲು ಗನಸು: ಮೇಕೆದಾಟು ಅಣೆಕಟ್ಟು ನಾವು ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾವು ಅಧಿಕಾರಕ್ಕೆ ಬಂದ ಕೂಡಲೆ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲಾಗುವುದು ಎಂದು ಲೋಕಸಭಾ ಚುನಾವಣೆಯ ವೇಳೆ ಹೇಳುತ್ತಿದ್ದರು. ಈಗ ಯಾಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಜೆಡಿಎಸ್ನವರು ಅಧಿಕಾರಕ್ಕೆ ಬರುವುದಿಲ್ಲ. ನಾನು ಜನತಾದಳದ (ಎಸ್) ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 2004 ಅತಿ ಹೆಚ್ಚು ಅಂದರೆ 59 ಸ್ಥಾನಗಳನ್ನು ಪಡೆದಿದ್ದೆವು. ಅವರ ಶಕ್ತಿ ಚುನಾವಣೆಯಿಂದ ಚುನಾವಣೆಗೆ ಕುಂಠಿತವಾಗಿದೆಯೇ ಹೊರೆತು ಹೆಚ್ಚಾಗಿಲ್ಲ. ಈಗ ಎಷ್ಟು ಸ್ಥಾನಗಳಿವೆ ಅವರಿಗೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಅವರದ್ದು ಹಗಲು ಗನಸು ಎಂದರು.
ಕ್ಯಾಂಪಸ್ ಆಯ್ಕೆ ಪರಿಚಯಿಸಲು ಸರಕಾರದ ಚಿಂತನೆ: ಕ್ಯಾಂಪಸ್ ಆಯ್ಕೆಯನ್ನು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಪುನಃ ಪರಿಚಯಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.







