‘ಸ್ಥಳೀಯ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಚುರುಕುಮುಟ್ಟಿಸಿ’ : ಸಚಿವರು, ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು : ಆಯಾ ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಸ್ಥಿತಿಗತಿ, ಕೃಷಿ ಚಟುವಟಿಕೆ ಹಾಗೂ ಬಿಡುಗಡೆಗೊಂಡ ಅನುದಾನದಲ್ಲಿ ಖರ್ಚಾಗಿರುವ ಹಣದ ಪ್ರಮಾಣ, ಕಾಮಗಾರಿ ಪೂರ್ಣಗೊಳಿಸಲು ಕಾಲಾವಧಿ ನಿಗಧಿ ಮಾಡುವ ಕುರಿತು ಅಧಿಕಾರಿಗಳನ್ನು ಚುರುಕುಗೊಳಿಸಿ ಎಂದು ಸಚಿವರು, ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಪ್ರತ್ಯೇಕವಾಗಿ ನಡೆಸಿದ ಸಮಾಲೋಚನೆ ಸಭೆಗಳಲ್ಲಿ ಅವರು ಮಾತನಾಡಿದರು.
ಕ್ಷೇತ್ರವಾರು ಬಿಡುಗಡೆಯಾಗಿರುವ ಅನುದಾನ, ಇಲಾಖಾವಾರು ಅನುದಾನಗಳ ಬಗ್ಗೆ ಚರ್ಚೆ ನಡೆಸಿ ಚುನಾವಣೆ ವೇಳೆ ನಾವು ಕ್ಷೇತ್ರದಲ್ಲಿ ಕೊಟ್ಟ ಆಶ್ವಾಸನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಜೊತೆಗೆ ಬಜೆಟ್‍ನಲ್ಲಿ ಘೋಷಿಸಿರುವ ಯೋಜನೆಗಳ ಜಾರಿಯ ಸ್ಥಿತಿಗತಿ ಬಗ್ಗೆ ತೀವ್ರ ಗಮನ ಹರಿಸಲು ಸಚಿವರು, ಶಾಸಕರು ಮುಂದಾಗಬೇಕು ಎಂದು ಅವರು ಹೇಳಿದರು.
ಎಲ್ಲ ಕೆಡಿಪಿ ಸಭೆಗಳಲ್ಲೂ ಶಾಸಕರು, ಸಚಿವರು ಅರ್ಥಪೂರ್ಣವಾಗಿ ಪಾಲ್ಗೊಳ್ಳಬೇಕು. ಅದಕ್ಕೆ ಮೊದಲು ಜನರ ಸಮಸ್ಯೆಗಳ ಬಗ್ಗೆ, ಕಾಮಗಾರಿಗೆ ಇರುವ ತಾಂತ್ರಿಕ ತೊಂದರೆಗಳ ಬಗ್ಗೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ಬಗ್ಗೆ ಕೆಡಿಪಿ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಅವರು ತಿಳಿಸಿದರು.
ರಾಜ್ಯದ ಜನರ ತಲಾ ಆದಾಯ ಇಡೀ ದೇಶದಲ್ಲಿ ಮೊದಲನೆ ಸ್ಥಾನಕ್ಕೆ ಬಂದಿದ್ದು, ಇದನ್ನು ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸಬೇಕು. ರಾಜ್ಯದ ಈ ಆರ್ಥಿಕ ಸಾಧನೆಗೆ ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳು ನೇರ ಕಾರಣವಾಗಿದೆ ಎನ್ನುವುದನ್ನು ಜನತೆಗೆ ಅರ್ಥ ಮಾಡಿಸುವ ಕೆಲಸ ಇನ್ನಷ್ಟು ವೇಗ ಪಡೆಯಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಕೇಂದ್ರದ ಅಸಹಕಾರ ಇದ್ದರೂ ನಮ್ಮ ರೈತರಿಗೆ ಸಮಸ್ಯೆ ಆಗಬಾರದು. ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಕಾಗಿದೆ. ಎಪ್ರಿಲ್ ನಿಂದ ಜುಲೈ ವರೆಗೆ 6.81 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತದೆ. ಆದರೆ ಕೇಂದ್ರ ಸರಕಾರ ಸರಬರಾಜು ಮಾಡಿದ್ದು 5.17 ಲಕ್ಷ ಮೆಟ್ರಿಕ್ ಟನ್. ಈ ವರ್ಷ 2 ಲಕ್ಷ ಹೆಕ್ಟೇರ್ ಮುಸುಕಿನ ಜೋಳ ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಹಾಗಾಗಿ, ಹೆಚ್ಚಿನ ಬೇಡಿಕೆ ಇದೆ ಎಂದು ಅವರು ಹೇಳಿದರು.
ಯೂರಿಯಾ ಸರಬರಾಜನ್ನು ಕೇಂದ್ರ ಸರಕಾರ ಕಡಿಮೆ ಮಾಡಿದೆ. ನಮಗೆ ಬರಬೇಕಾದ ಯೂರಿಯಾ ಪ್ರಮಾಣದಲ್ಲಿ 1.66 ಲಕ್ಷ ಮೆಟ್ರಿಕ್ ಟನ್ ಕಡಿಮೆ ಆಗಿದೆ. ಆದರೂ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ದುರುದ್ದೇಶ ಹಾಗೂ ನಾಚಿಕೆಗೇಡಿತನದ ಕ್ರಮವಾಗಿದೆ. ಇದನ್ನು ನೀವು ಕ್ಷೇತ್ರದ ಜನತೆಗೆ ಅರ್ಥ ಮಾಡಿಸಬೇಕು. ಕೇಂದ್ರ ಸರಕಾರ ಅಸಹಕಾರದ ನಡುವೆಯೂ ನಮ್ಮ ರೈತರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಹಿಂದಿನ ಬಿಜೆಪಿ ಸರಕಾರದ ಲೋಪಗಳನ್ನು ನಾವು ಸರಿ ಮಾಡುವ ಜೊತೆಗೆ ಆರ್ಥಿಕತೆಗೆ ಚೈತನ್ಯ ನೀಡುತ್ತಿದ್ದೇವೆ. ಹಿಂದಿನ ಬಿಜೆಪಿ ಸರಕಾರ 2,70,695 ಕೋಟಿ ರೂಪಾಯಿ ಕಾಮಗಾರಿಗಳನ್ನು ತೆಗೆದುಕೊಂಡು ಅನುದಾನ ನೀಡದೆ ಟೆಂಡರ್‍ಗಳನ್ನು ಕರೆದಿದ್ದರು. ಅಲ್ಲದೆ, 1,66,426 ಕೋಟಿ ರೂ. ಮುಖ್ಯಮಂತ್ರಿಯ ವಿವೇಚನಾ ಕೋಟಾದಡಿ ಕಾಮಗಾರಿಗಳನ್ನು ತೆಗೆದುಕೊಂಡು 72 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಿಲ್ ಗಳನ್ನು ಬಿಟ್ಟು ಹೋಗಿದ್ದರು ಎಂದು ಸಿದ್ದರಾಮಯ್ಯ ಗಮನ ಸೆಳೆದರು.
ಕೇಂದ್ರ ಸರಕಾರವು 15ನೆ ಹಣಕಾಸು ಆಯೋಗದ ವರದಿಯ ನೆಪದಲ್ಲಿ ಶೇ.23 ರಷ್ಟು ತೆರಿಗೆ ಪಾಲು ಕಡಿಮೆ ಮಾಡಿದೆ. ರಾಜ್ಯಕ್ಕೆ ಈ 5 ವರ್ಷಗಳಲ್ಲಿ 68 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಇದನ್ನು ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸುವ ಜೊತೆಗೆ ನೀವುಗಳೂ ಅರ್ಥ ಮಾಡಿಕೊಳ್ಳಬೇಕು. ಇಷ್ಟರ ನಡುವೆ, ನಾವು ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ 52 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಪಿಂಚಣಿಗಳು, ಸಹಾಯಧನಗಳು, ಫ್ರೋ ತ್ಸಾಹ ಧನಗಳು ಹಾಗೂ ಫಲಾನುಭವಿಗಳಿಗೆ ನೇರವಾಗಿ ತಲುಪುವ ಯೋಜನೆಗಳಿಗಾಗಿ ಪ್ರತಿ ವರ್ಷ 1.12 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದು ಅವರು ಉಲ್ಲೇಖಿಸಿದರು.
ರಾಜ್ಯ ಸರಕಾರ ಮಾಡಿರುವ ಸಾಲದ ಬಡ್ಡಿ ತೀರಿಸುವುದಕ್ಕಾಗಿ 45,600 ಕೋಟಿ ರೂ.ಗಳು ವೆಚ್ಚವಾಗುತ್ತಿದೆ. ಈ ಸಂಕಷ್ಟಗಳ ಮಧ್ಯೆಯೂ ನಾವು ಚುನಾವಣೆಗೆ ಮೊದಲು ಕೊಟ್ಟ ಆಶ್ವಾಸನೆಗಳ ಪ್ರಕಾರ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೇವೆ ಎಂದ ಅವರು, ಇತ್ತೀಚಿಗೆ ಶಕ್ತಿ ಯೋಜನೆ ಮೇಲೆ ನಡೆದಿರುವ ಅಧ್ಯಯನ ಪ್ರಕಾರ, ಶಕ್ತಿ ಯೋಜನೆಯಿಂದ ಮಹಿಳೆಯರ ಉದ್ಯೋಗದ ಪ್ರಮಾಣ ಬೆಂಗಳೂರಿನಲ್ಲಿ ಶೇ.23 ರಷ್ಟು, ಧಾರವಾಡದಲ್ಲಿ ಶೇ.21 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಇವೆಲ್ಲವೂ ಆಶಾದಾಯಕವಾದ ಸಂಗತಿಗಳಾಗಿವೆ. ಕೇಂದ್ರ ಸರಕಾರದ ಅಸಹಕಾರ, ಹಿಂದಿನ ಸರಕಾರದ ಆರ್ಥಿಕ ದುರಾಡಳಿತ, ಅಶಿಸ್ತುಗಳಿಂದಾಗಿ ರಾಜ್ಯದ ಆರ್ಥಿಕತೆಯು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ ಸಹ ದಿನೆ ದಿನೆ ರಾಜ್ಯದ ಆಡಳಿತವನ್ನು ಉತ್ತಮ ದಿಕ್ಕಿನ ಕಡೆ ನಡೆಸುತ್ತಿದ್ದೇವೆ. ಇದಕ್ಕೆ ನೀವೆಲ್ಲರೂ ಸಹಕಾರ ನೀಡುತ್ತಿರುವುದಕ್ಕೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ನುಡಿದರು.
ಸಚಿವರು, ಶಾಸಕರೊಂದಿಗೆ ನಡೆದ ಸಭೆಗಳಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.







