‘ವಿಪಕ್ಷಗಳ ಆಧಾರ ರಹಿತ ಆರೋಪಗಳನ್ನು ಬಯಲು ಮಾಡಿ’ : ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ಆ.12: ವಿರೋಧ ಪಕ್ಷಗಳು ರಾಜ್ಯ ಸರಕಾರದ ವಿರುದ್ಧ ಮಾಡುವಂತಹ ಆಧಾರ ರಹಿತ ಆರೋಪಗಳು ಹಾಗೂ ಸುಳ್ಳುಗಳನ್ನು, ದಾಖಲೆ ಹಾಗೂ ಅಂಕಿ ಅಂಶಗಳ ಸಮೇತ ಸಮರ್ಥವಾಗಿ ಪ್ರಸ್ತಾಪಿಸಿ, ಅವರ ಆರೋಪಗಳನ್ನು ಬಯಲು ಮಾಡುವಂತೆ ಕಾಂಗ್ರೆಸ್ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಶಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಸರಕಾರದ ವಿರುದ್ಧ ಮಾಡುವುದೆ ಆಪಾದನೆಗಳು ಇರಲಿ. ಅವುಗಳಿಗೆ ತಕ್ಕ ಉತ್ತರವನ್ನು ಸದನದಲ್ಲಿ ಶಾಸಕರು ನೀಡಬೇಕು ಎಂದು ಹೇಳಿದರು.
ರಸಗೊಬ್ಬರ ಸಮಸ್ಯೆ, ಆರ್‍ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಮತಗಳ್ಳತನ, ಸಾರಿಗೆ ಸಿಬ್ಬಂದಿಗಳ ಮುಷ್ಕರ, ಅಭಿವೃದ್ಧಿ ಕಾಮಗಾರಿಗಳು, ಅನುದಾನ ಬಿಡುಗಡೆ ಸೇರಿದಂತೆ ಯಾವುದೆ ವಿಚಾರವಿರಲಿ, ವಿಪಕ್ಷಗಳನ್ನು ಸದನದಲ್ಲಿ ಕಟ್ಟಿ ಹಾಕುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ವಿಚಾರದ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿದೆ. ಅಲ್ಲದೇ, ವಿಧೇಯಕಗಳ ಕುರಿತು ಚರ್ಚೆ ನಡೆಯುವಾಗ ಹಾಗೂ ಅನುಮೋದನೆ ಪಡೆಯುವಾಗ ಶಾಸಕರು ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ಮುಖ್ಯಮಂತ್ರಿ ಸೂಚಿಸಿದರು ಎಂದು ತಿಳಿದು ಬಂದಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಎನ್. ಎಸ್.ಭೋಸರಾಜು, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು.







