ʼಕೆ.ಎನ್.ರಾಜಣ್ಣ ವಜಾʼ ಪಕ್ಷದ ಆಂತರಿಕ ವಿಚಾರ : ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಆ.14 : ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ಪಕ್ಷದ ಆಂತರಿಕ ವಿಚಾರವಾಗಿದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಕಲಾಪದ ಶೂನ್ಯವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಕಾರಣಗಳ ಬಗ್ಗೆ ಸರಕಾರದಿಂದ ಸೂಕ್ತ ಉತ್ತರ ಬಂದಿಲ್ಲ. ರಾಜಣ್ಣನ ವಜಾಗೊಳಿಸುವ ಮೂಲಕ ದಲಿತ ನಾಯಕನನ್ನು ತುಳಿಯಲಾಗಿದೆ. ಇದು ಕಾಂಗ್ರೆಸ್ ಸಂಸ್ಕೃತಿಯೇ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಒಬ್ಬರನ್ನು ತುಳಿಯುವುದು ನಿಮ್ಮ(ಬಿಜೆಪಿ) ಸಂಸ್ಕೃತಿ. ನಿಮಗೆ ಉತ್ತರ ಕೊಡುವ ಅಗತ್ಯವಿಲ್ಲ. ಕೆಲಸಕ್ಕೆ ಬಾರದ ವಿಚಾರವನ್ನು ಏಕೆ ಮಾತನಾಡುತ್ತೀರಾ? ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ, ಬಸನಗೌಡ ಪಾಟೀಲ್ ಯತ್ನಾಳ್ರನ್ನು ಉಚ್ಚಾಟನೆ ಮಾಡಿದಾಗ ಉತ್ತರ ಕೊಟ್ಟಿದ್ದೀರಾ?, ಇದು ಪಕ್ಷದ ಆಂತರಿಕ ವಿಚಾರ’ ಎಂದು ತಿರುಗೇಟು ನೀಡಿದರು.
ಆಗ ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ‘ಈ ವಿಷಯದ ಬಗ್ಗೆ ಸಭಾ ನಾಯಕರು ಉತ್ತರಿಸಿದ್ದಾರೆ. ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ’ ಎಂದು ರೂಲಿಂಗ್ ನೀಡಿ ಗದ್ದಲಕ್ಕೆ ಕೊನೆ ಹಾಡಿದರು.







