ರಾಹುಲ್ ಗಾಂಧಿಗೆ ಜೀವ ಬೆದರಿಕೆ | ಪ್ರಧಾನಿ, ಗೃಹ ಸಚಿವರ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ
ಬೆಂಗಳೂರು : ʼಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ನಿರಂತರ ಧ್ವನಿಯೆತ್ತುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಎದೆಗೆ ಗುಂಡು ಹೊಡೆಯುತ್ತೇವೆ, ಹುಷಾರ್..!! ಎಂದು ಬಿಜೆಪಿ ವಕ್ತಾರರೊಬ್ಬರು ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ನೋಡಿದರೆ ಹೇಳಿಕೆಯ ಬಗ್ಗೆ ಅವರಿಗೂ ಸಮ್ಮತಿ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿದೆʼ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಬೆದರಿಕೆ ಒಡ್ಡಿ ಸೈದ್ಧಾಂತಿಕ ವಿರೋಧಿಗಳ ಧ್ವನಿ ಅಡಗಿಸುವುದು, ಅದಕ್ಕೂ ಬಗ್ಗದಿದ್ದಾಗ ಅವರನ್ನೇ ಇಲ್ಲವಾಗಿಸುವುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದೇನಲ್ಲ. ಮೊದಲೆಲ್ಲ ತೆರೆಮರೆಯಲ್ಲಿ ನಿಂತು ತಮ್ಮ ವಿರೋಧಿಗಳ ಹತ್ಯೆಗಳಿಗೆ ಬೆಂಬಲ ನೀಡುತ್ತಾ ಬಂದವರು, ಈಗ ನೇರಾ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಎದುರಾಳಿಗಳನ್ನು ಸಂವಾದ, ಚರ್ಚೆಗಳ ಮೂಲಕ ಸೈದ್ಧಾಂತಿಕವಾಗಿ ಎದುರಿಸಲಾಗದವರು ದೈಹಿಕವಾಗಿ ಮುಗಿಸಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂಘಪರಿವಾರದ ದುರುಳರಿಂದ ಪ್ರಾಣ ಕಳೆದುಕೊಂಡವರು ಒಬ್ಬರಾ? ಇಬ್ಬರಾ? ಮಹಾತ್ಮ ಗಾಂಧಿಯವರಿಂದ ಆರಂಭಗೊಂಡ ಈ ಹತ್ಯಾ ಸರಣಿ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರ ಕೊಲೆಗಾರರಿಗೂ ತಮಗೂ ಸಂಬಂಧವಿಲ್ಲವೆಂದು ಹೇಳಿ ಸಂಘಪರಿವಾರದ ನಾಯಕರು ಸುಲಭದಲ್ಲಿ ತಲೆತೊಳೆದುಕೊಂಡರೂ, ಅವರ ಕೈಗಳಿಗಂಟಿದ ರಕ್ತದ ಕಲೆಗಳನ್ನು ತೊಳೆಯಲಾಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ನನಗೆ ಮಾತ್ರವಲ್ಲ ನಾಡಿನ ಅನೇಕ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರಿಗೂ ಕೊಲೆ ಬೆದರಿಕೆ ಒಡ್ಡಿ ಪತ್ರಗಳನ್ನು ಬರೆಯಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಹೆದರಿ ನಂಬಿದ ಸಿದ್ಧಾಂತಕ್ಕೆ ಬೆನ್ನು ಹಾಕುವ ಜಾಯಮಾನ ನನ್ನದಲ್ಲ. ಒಂದಲ್ಲಾ ಒಂದು ದಿನ ನ್ಯಾಯದ ಎದುರು ಈ ಎಲ್ಲಾ ದುಷ್ಟರು ಮಂಡಿಯೂರುತ್ತಾರೆಂಬ ಭರವಸೆ ನನಗಿದೆ ಎಂದಿದ್ದಾರೆ.
ರಾಹುಲ್ ಗಾಂಧಿಯವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದು ಮೊದಲಲ್ಲ. ಇಂತಹ ಕೊಲೆಗಡುಕರಿಂದಲೇ ರಾಹುಲ್ ಗಾಂಧಿಯವರು ತಮ್ಮ ಅಜ್ಜಿ ಮತ್ತು ಅಪ್ಪನನ್ನು ಕಳೆದುಕೊಂಡವರು. ರಾಹುಲ್ ಗಾಂಧಿ ಈಗ ಒಬ್ಬಂಟಿ ಅಲ್ಲ, ಅವರ ಬೆಂಬಲಕ್ಕೆ ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರಿದ್ದಾರೆ ಎನ್ನುವುದು ಬಿಜೆಪಿಯ ಕೊಲೆಗಡುಕ ಮನಸ್ಸುಗಳಿಗೆ ತಿಳಿದಿರಲಿ ಎಂದು ಎಚ್ಚರಿಸಿದ್ದಾರೆ.







