ಆರೆಸ್ಸೆಸ್ ಬರೆದುಕೊಟ್ಟಿದ್ದನ್ನು ಓದಿ ಹೋಗುವುದಷ್ಟೇ ಬಿಜೆಪಿಯವರ ಕೆಲಸ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.21: ಬಿಜೆಪಿಯ ಆರ್.ಅಶೋಕ್, ವಿಜಯೇಂದ್ರ ಸೇರಿ ಯಾರದ್ದೂ ಸ್ವಂತ ಮಾತು ಇಲ್ಲ. ಆರೆಸ್ಸೆಸ್‍ನವರು ಬರೆದುಕೊಟ್ಟಿದ್ದನ್ನು ಓದಿ ಹೋಗುವುದಷ್ಟೇ ಬಿಜೆಪಿಯವರ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮಂಗಳವಾರ ಇಲ್ಲಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನ ವೇಳೆ ಒಮ್ಮೆ ಆರ್.ಅಶೋಕ್‍ಗೆ ಈ ಕುರಿತು ಪ್ರಶ್ನೆ ಕೇಳಿದ್ದೆ. ಆಗ ಆರ್.ಅಶೋಕ್ ಅವರು, ‘ಏನು ಮಾಡೋದು ಸರ್. ಆರೆಸ್ಸೆಸ್ ಅವರು ಒಬ್ಬರು ಬಂದು ಕುಳಿತಿರುತ್ತಾರೆ. ಅವರು ಹೇಳಿದ್ದನ್ನು ಹೇಳದೇ ಹೋದರೆ ನಮ್ಮನ್ನು ಬಿಡಲ್ಲ ಸರ್’ ಎಂದು ಉತ್ತರಿಸಿದ್ದರು ಎಂದು ವಿವರಿಸಿದರು.
ಸಂಸದ ತೇಜಸ್ವಿ ಸೂರ್ಯ ಅವರನ್ನು ನಾನು ಅಮವಾಸ್ಯೆ ಸೂರ್ಯ ಅಂತ ಕರೆಯುತ್ತೇನೆ. ರಾಜ್ಯದ ಆಗುತ್ತಿರುವ ಅನ್ಯಾಯ, ದ್ರೋಹದ ಬಗ್ಗೆಅಮವಾಸ್ಯೆ ಸೂರ್ಯ ಇವತ್ತಿನವರೆಗೆ ಬಾಯಿ ಬಿಟ್ಟಿದ್ದಾರಾ? ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ನಿಮ್ಮ ಪರವಾಗಿ ಪಾರ್ಲಿಮೆಂಟಿನಲ್ಲಿ ಬಾಯಿ ಬಿಟ್ಟಿದ್ದಾರಾ ಹೇಳಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಸಚಿವರಾದ ಶೋಭಾ ಕರಂದ್ಲಾಜೆ, ಹೆಚ್.ಡಿ.ಕುಮಾರಸ್ವಾಮಿ ಅವರು ಮೋದಿ ಸರಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಮೋಸ, ದ್ರೋಹದ ಬಗ್ಗೆ ಒಂದೇ ಒಂದು ದಿನ ಬಾಯಿ ಬಿಟ್ಟಿದ್ದಾರಾ? ಇಂಥವರನ್ನು ಗೆಲ್ಲಿಸಿದ ನಿಮಗಾಗಲೀ, ರಾಜ್ಯಕ್ಕಾಗಲೀ, ಅವರು ಗೆದ್ದ ಪಾರ್ಲಿಮೆಂಟ್ ಕ್ಷೇತ್ರಕ್ಕಾಗಲೀ ಏನು ಸಿಕ್ಕಿದೆ ಹೇಳಿ ಎಂದು ಅವರು ತಿಳಿಸಿದರು.







