ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳು ವಾಪಸ್ : ಸಿಎಂ ಸಿದ್ದರಾಮಯ್ಯ ಭರವಸೆ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡಿರುವವರ ಮೇಲಿನ ಪ್ರಕರಣಗಳನ್ನು ನಮ್ಮ ಸರಕಾರ ವಾಪಸ್ ಪಡೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರರು. ದೇವರಾಜ ಅರಸು ಅವರು ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಕರೆದರೂ ಕನ್ನಡ ಪಕ್ಷ ಮತ್ತು ಕನ್ನಡ ಹೋರಾಟ ಬಿಡಲು ವಾಟಾಳ್ ಅವರು ಒಪ್ಪಲಿಲ್ಲ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಾವೆಲ್ಲರೂ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ನೆಲದಲ್ಲಿ ಕನ್ನಡದ ವಾತಾವರಣ ಬೆಳೆಸಬೇಕು. ಇದಕ್ಕಾಗಿ ಯಾರು ಯಾವುದೆ ಭಾಷೆಯಲ್ಲಿ ಮಾತನಾಡಿದರೂ ನೀವು ಕನ್ನಡದಲ್ಲೆ ಉತ್ತರ ಕೊಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಕನ್ನಡ ನೆಲದಲ್ಲಿ ಬದುಕು ಕಟ್ಟಿಕೊಂಡ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಗೌರವಿಸುತ್ತಾರೆ. ಕನ್ನಡ ನೆಲದಲ್ಲಿ ನಾವು ಕನ್ನಡದಲ್ಲೆ ಮಾತನಾಡುತ್ತೇವೆ ಎನ್ನುವ ಶಪಥ ಮಾಡೋಣ. ಪ್ರತಿಯೊಬ್ಬರಲ್ಲೂ ನಮ್ಮ ಭೂಮಿ, ನಮ್ಮ ನೆಲ, ನಮ್ಮ ಜಲ, ನಮ್ಮ ಭಾಷೆ ಎನ್ನುವ ಅಭಿಮಾನ ಮೂಡಲಿ ಎಂದು ಮುಖ್ಯಮಂತ್ರಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಿಂದ ದೇವರಾಜು ಅರಸು ಅವರಿಗೆ ಮರಣೋತ್ತರ ಡಾಕ್ಟರೇಟ್ ಪ್ರಶಸ್ತಿ ನೀಡಬೇಕು ಎನ್ನುವ ವಾಟಾಳ್ ನಾಗರಾಜ್ ಮತ್ತು ಸಾ.ರಾ.ಗೋವಿಂದು ಅವರ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ, ಈ ಬಗ್ಗೆ ಸಿಂಡಿಕೇಟ್ ಸದಸ್ಯರ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಮೈಸೂರು ವಿವಿಯಲ್ಲಿ ನನಗೆ ಹಿಂದೆಯೇ ಡಾಕ್ಟರೇಟ್ ಕೊಡುತ್ತೇವೆ ಎಂದಿದ್ದರು. ಆದರೆ ನಾನು ಪಡೆಯಲಿಲ್ಲ. ಬೇಡ ಅಂದೆ. ಓದಿ, ಜ್ಞಾನ ವಿಸ್ತಾರ ಮಾಡಿಕೊಂಡು ಡಾಕ್ಟರೇಟ್ ಪಡೆಯಬೇಕು ಎನ್ನುವುದು ನನ್ನ ವೈಯುಕ್ತಿಕ ಭಾವನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ದ್ವಿಭಾಷಾ ನೀತಿ ಪರವಾಗಿದ್ದೇನೆ: ನಾನು ವೈಯುಕ್ತಿಕವಾಗಿ ದ್ವಿಭಾಷಾ ಪರವಾಗಿ ಇದ್ದೇನೆ. ಆದರೆ, ದ್ವಿಭಾಷಾ ನೀತಿಯಾಗಿ ಕಾನೂನು ಜಾರಿ ಆಗಬೇಕಾದರೆ ಸಂಪುಟ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ತಿಳಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂ.ಇ.ಎಸ್)ಯವರು ಕನ್ನಡಿಗರೆ. ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಅದನ್ನು ಮಟ್ಟಹಾಕುತ್ತೇವೆ. ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಇರುವುದನ್ನೆಲ್ಲ ಮಾಡಲು ಸರಕಾರ ಸಿದ್ದವಿದೆ ಎಂದು ಅವರು ಹೇಳಿದರು.
ಬೆಳಗಾವಿ ಕರ್ನಾಟಕದ ಭಾಗ: ಬೆಳಗಾವಿ ವಿಚಾರದಲ್ಲಿ ರಾಜಿ ಇಲ್ಲ. ಮಹಾಜನ್ ವರದಿಯೆ ಅಂತಿಮ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಭಾಗ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







