ಸುರಂಗ ರಸ್ತೆ ಯೋಜನೆಗೆ ಬಿಜೆಪಿ ರಾಜಕೀಯ ಪ್ರೇರಿತ ವಿರೋಧ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರಿನಲ್ಲಿ ಉದ್ದೇಶಿತ ಸುರಂಗ (ಟನಲ್) ರಸ್ತೆ ಯೋಜನೆ ಬಗ್ಗೆ ಬಿಜೆಪಿ ನಾಯಕರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರಂಗ ರಸ್ತೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಉತ್ತರ ನೀಡಿದ್ದಾರೆ. ಯೋಜನೆಯ ಬಗ್ಗೆ ವಿರೋಧಪಕ್ಷದ ಕಳವಳಗಳನ್ನು ಪರಿಶೀಲಿಸಿ ಒಮ್ಮತಕ್ಕೆ ಬರಲು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದೇವೆ. ಆದರೂ, ರಾಜಕೀಯವಾಗಿ ವಿರೋಧ ಮಾಡಲು ಮುಂದಾಗಿದ್ದಾರೆ ಎಂದರು.
ಯೋಜನೆ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ. ಸಂಚಾರ ಸಮಸ್ಯೆಯನ್ನು ಹೋಗಲಾಡಿಸುವ ಈ ಯೋಜನೆಗೆ ವಿರೋಧ ಏಕೆ ವ್ಯಕ್ತವಾಗಬೇಕು? ಇದೇ ರೀತಿಯ ಸುರಂಗ ಯೋಜನೆಗಳನ್ನು ಅನೇಕ ದೇಶದಲ್ಲಿಯೂ ಕೈಗೊಳ್ಳಲಾಗಿದೆ. ಅಲ್ಲಿನ ಜನರು ಇದನ್ನು ವಿರೋಧಿಸಿಲ್ಲ ಎಂದರು.
ಸುರಂಗ ಯೋಜನೆಯನ್ನು ಶ್ರೀಮಂತರನ್ನು ಗಮನದಲ್ಲಿರಿಸಿಕೊಂಡು ಮಾಡಲಾಗಿದೆ ಎಂದು ದೂರು ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸುರಂಗ ಯೋಜನೆಯನ್ನು ಕಾರು, ಬಸ್, ದ್ವಿಚಕ್ರ ವಾಹನ, ಕಾಲ್ನಡಿಗೆಯವರಿಗೂ ಅನುಕೂಲವಾಗಲೆಂದು ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.







