ಕೇಂದ್ರ ಸರಕಾರವು ರಾಜ್ಯಗಳಿಗೆ ಸಹಭಾಗಿತ್ವದ ಬದಲಿಗೆ ಶಿಕ್ಷೆಯನ್ನು ನೀಡುತ್ತಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಯುಪಿಎ ಅವಧಿಯಲ್ಲಿ ಉದ್ಯೋಗ ಖಾತರಿ, ಆಹಾರ ಭದ್ರತೆ ಮತ್ತು ಮಾಹಿತಿ ಹಕ್ಕಿನಂತಹ ಜನಪರ ಕಾನೂನುಗಳ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು, ರಾಜ್ಯಗಳಿಗೆ ನಂಬಿಕೆಯ ಬದಲಿಗೆ ನಿಯಂತ್ರಣವನ್ನು ಮತ್ತು ಸಹಭಾಗಿತ್ವದ ಬದಲಿಗೆ ಶಿಕ್ಷೆಯನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ಸಮಾಜವಾದಿ ಸಮಾಗಮ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ‘ದಕ್ಷಿಣ ಭಾರತದ ಸಮಾಜವಾದಿ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುಪಿಎ ಅವಧಿಯಲ್ಲಿ ರಚನೆಯಾದ 14ನೇ ಹಣಕಾಸು ಆಯೋಗವು ಕರ್ನಾಟಕದ ಕೊಡುಗೆಯನ್ನು ಗುರುತಿಸಿ ನಮಗೆ ಶೇ.4.72 ಪಾಲನ್ನು ನೀಡಿತ್ತು. ಆದರೆ, ಬಿಜೆಪಿ ರಚಿಸಿದ 15ನೇ ಹಣಕಾಸು ಆಯೋಗದಲ್ಲಿ ನಮ್ಮ ಪಾಲನ್ನು ಶೇ.3.64ಕ್ಕೆ ಇಳಿಸಿದೆ. ಈ ಒಂದೇ ನಿರ್ಧಾರದಿಂದ ಕರ್ನಾಟಕವು ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕಳೆದುಕೊಂಡಿದೆ. 2017ರಿಂದ ಸೆಸ್ ಮತ್ತು ಸರ್‍ಚಾರ್ಜ್‍ಗಳ ಮೂಲಕವೇ ಕರ್ನಾಟಕಕ್ಕೆ 53ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಕಡಿತಗೊಳಿಸುವ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಕಬಳಿಸುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ರಾಜ್ಯಗಳಿಗೆ ಆರ್ಥಿಕ ಅಧಿಕಾರವಿಲ್ಲದಂತೆ ಮಾಡುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‍ಎಸ್ ಜೊತೆಗೂಡಿ ಕ್ಷೇತ್ರ ಮರುವಿಂಗಡಣೆ, ಸಾಂವಿಧಾನದ ಆಶಯಗಳ ನಾಶ ಮತ್ತು ಒಕ್ಕೂಟ ವ್ಯವಸ್ಥೆಯ ದಮನದಂತಹ ಮೂರು ಅಪಾಯಗಳನ್ನು ತರುತ್ತಿವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಬಿಜೆಪಿ ಉದ್ದೇಶಿಸಿರುವ ರೀತಿಯಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ, ದಕ್ಷಿಣ ಭಾರತದ ರಾಜಕೀಯ ಧ್ವನಿ ದುರ್ಬಲಗೊಳ್ಳುತ್ತದೆ. ಅಧ್ಯಯನಗಳ ಪ್ರಕಾರ ಉತ್ತರದ ರಾಜ್ಯಗಳು ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಬಹುದು, ದಕ್ಷಿಣದ ರಾಜ್ಯಗಳು ಸ್ಥಾನಗಳನ್ನು ಕಳೆದುಕೊಳ್ಳಬಹುದು. ಕರ್ನಾಟಕವೂ ತನ್ನ ರಾಜಕೀಯ ಪ್ರಭಾವವನ್ನೇ ಕಳೆದುಕೊಳ್ಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಚುನಾಯಿತ ಸರಕಾರಗಳ ಸಲಹೆಯಂತೆ ನಡೆಯಬೇಕಾದ ರಾಜ್ಯಪಾಲರನ್ನು, ಕೇಂದ್ರ ಸರಕಾರವು ರಾಜ್ಯಗಳ ಆಡಳಿತಕ್ಕೆ ಅಡ್ಡಿಪಡಿಸಲು ಬಳಸಿಕೊಳ್ಳುತ್ತಿದೆ. ಒಕ್ಕೂಟ ವ್ಯವಸ್ಥೆಯು ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು ಎಂದು ಕೇಂದ್ರವು ಅರ್ಥ ಮಾಡಿಕೊಳ್ಳಬೇಕು. ರಾಜ್ಯಗಳ ಹಕ್ಕು, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ನ್ಯಾಯದ ರಕ್ಷಣೆಗಾಗಿ ಎಲ್ಲರೂ ಒಗ್ಗೂಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಅವರು ಕರೆ ನೀಡಿದರು.
ಕರ್ನಾಟಕದಲ್ಲಿ ಲೋಹಿಯಾ ಭವನ ನಿರ್ಮಾಣಕ್ಕೆ ಕ್ರಮ: ಸಮಾಜವಾದಿ ಸಂಪ್ರದಾಯವು ಯಾವಾಗಲೂ ರಾಜ್ಯಗಳು, ಹಿಂದುಳಿದ ಪ್ರದೇಶಗಳು, ಭಾಷಾ ಅಲ್ಪಸಂಖ್ಯಾತರು, ಕಾರ್ಮಿಕರು, ರೈತರು ಹಾಗೂ ಮಹಿಳೆಯರ ಪರವಾಗಿ ನಿಂತಿದೆ. ಹೀಗಾಗಿ ಸಮಾಜವಾದಿಗಳ ಬೇಡಿಕೆಯಂತೆ ಕರ್ನಾಟಕದಲ್ಲಿ ಲೋಹಿಯಾ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಹಿರಿಯ ಸಮಾಜವಾದಿ ಚಿಂತಕ ಹಾಗೂ ಕೇರಳದ ಮಾಜಿ ಹಣಕಾಸು ಸಚಿವ ಪ್ರೊ.ಇಸಾಕ್ ಥಾಮಸ್, ತೆಲಂಗಾಣ ಶಾಸಕ ವಂಶಿಕೃಷ್ಣ, ಮಾಜಿ ಸಂಸದ ಥಂಪನ್ ಥಾಮಸ್, ಮಾಜಿ ಸಂಸದ ಎಲ್.ಹನುಮಂತಯ್ಯ, ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷ ಸುಂದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶೀಘ್ರವೇ ದಕ್ಷಿಣ ಭಾರತ ರಾಜ್ಯಗಳ ಸಿಎಂಗಳ ಸಭೆ: ‘ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗುತ್ತಿದ್ದು, ಇದನ್ನು ಪ್ರಜಾಸತ್ತಾತ್ಮಕವಾಗಿಯೇ ಪ್ರಶ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಲು ಬೆಂಗಳೂರಿನಲ್ಲಿ ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಶೀಘ್ರವೇ ಆಯೋಜಿಸಲಾಗುವುದು’
-ಸಿದ್ದರಾಮಯ್ಯ, ಮುಖ್ಯಮಂತ್ರಿ







