ಸೆಸ್-ಸಚಾರ್ಜ್ ಮೂಲಕ 6 ಲಕ್ಷ ಕೋಟಿ ರೂ.ಸಂಗ್ರಹ; ರಾಜ್ಯಗಳಿಗೆ ಒಂದು ಪೈಸೆಯೂ ಇಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರ ಸರಕಾರ ಸೆಸ್ ಮತ್ತು ಸಚಾರ್ಜ್ ಮೂಲಕ ಸುಮಾರು 6ಲಕ್ಷ ಕೋಟಿ ರೂ. ವಸೂಲಿ ಮಾಡುತ್ತಿದೆ. ಇದರಲ್ಲಿ ರಾಜ್ಯಗಳಿಗೆ ಒಂದು ಪೈಸೆಯೂ ಬರುವುದಿಲ್ಲ. ಈ ಬಗ್ಗೆ ಧ್ವನಿ ಎತ್ತಿ ರಾಜ್ಯಗಳಿಗೂ ಪಾಲು ನೀಡಿ ಎಂದು ನಮ್ಮ ಸರಕಾರ ಒತ್ತಾಯಿಸಿದ್ದರೂ, ಇದು ಜಾರಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಅವರು, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನುದಾನ ಕಡಿತದ ಬಗ್ಗೆ ನಾನೇ ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ವಿತ್ತ ಸಚಿವರನ್ನು ಈ ಸಂಬಂಧ ಭೇಟಿ ಮಾಡಲಾಗಿದೆ. ಜಿಎಸ್‍ಟಿ ಸಮಿತಿ ಸಭೆಯಲ್ಲಿ ರಾಜ್ಯ ಸರಕಾರ ತನ್ನ ನಿಲುವನ್ನು ಮಂಡಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2022 ರಿಂದ ಪ್ರತಿ ವರ್ಷ ರಾಜ್ಯಕ್ಕೆ 18 ರಿಂದ 20 ಸಾವಿರ ಕೋಟಿ ರೂ.ಗಳಷ್ಟು ಜಿಎಸ್‍ಟಿ ಪರಿಹಾರ ನಷ್ಟವಾಗಿದೆ. ಅಂದರೆ, 4 ವರ್ಷಗಳಲ್ಲಿ 75 ರಿಂದ 80 ಸಾವಿರ ಕೋಟಿ ರೂ.ನಷ್ಟವಾಗಿದೆ. ಜಿಎಸ್‍ಟಿ ಪರಿಹಾರದ ಸೆಸ್ಸನ್ನು ಕೇಂದ್ರದವರು ಜನರಿಂದ ಸಂಗ್ರಹಿಸುವುದನ್ನು ನಿಲ್ಲಿಸಿದ್ದರೆ ಒಪ್ಪುತ್ತಿದ್ದೆ. 2025-26 ರಲ್ಲಿ 1.67 ಲಕ್ಷ ಕೋಟಿ ರೂ.ಗಳಷ್ಟು ಸೆಸ್ಸನ್ನು ಸಂಗ್ರಹಿಸಿದ್ದಾರೆ. ಈ ವರ್ಷ ಎಲ್ಲ ಸೆಸ್, ಸಚಾರ್ಜ್ ಮುಂತಾದವು ಸೇರಿ 6 ಲಕ್ಷ ಕೋಟಿ ರೂ.ಸಂಗ್ರಹಿಸುತ್ತಿದ್ದಾರೆ ಮುಖ್ಯಮಂತ್ರಿ ಅಂಕಿ ಅಂಶ ನೀಡಿದರು.
16ನೆ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ. 14ನೆ ಹಣಕಾಸು ಆಯೋಗವು ನಮಗೆ ಶೇ.4.71ರಷ್ಟು ತೆರಿಗೆ ಹಂಚಿಕೆ ಮಾಡಿತ್ತು. ಅದಕ್ಕಿಂತ ಹೆಚ್ಚಿನ ಅನುದಾನ ಸಿಕ್ಕರೆ ಮಾತ್ರ ನಮಗೆ ನ್ಯಾಯ ದೊರೆಯುತ್ತದೆ. ಆದರೆ, 16ನೆ ಹಣಕಾಸು ಆಯೋಗವು ಶೇ.4.131 ರಷ್ಟನ್ನು ಮಾತ್ರ ಶಿಫಾರಸ್ಸು ಮಾಡಿದೆ. ತೆರಿಗೆ ಪಾಲನ್ನು ಶೇ.50ಕ್ಕೆ ಏರಿಸಿ ಎಂದು ಕೇಳಿದ್ದೆವು. ಆದರೆ, ಶೇ.41ರಷ್ಟೇ ಕೊಟ್ಟಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕರ್ನಾಟಕದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 5 ವರ್ಷಗಳಲ್ಲಿ 37,372 ಕೋಟಿ ರೂ. ಸಿಕ್ಕಿದ್ದರೆ, ಉತ್ತರಪ್ರದೇಶಕ್ಕೆ 1.17 ಲಕ್ಷ ಕೋಟಿ ರೂ., ಮಹಾರಾಷ್ಟ್ರಕ್ಕೆ 79.6 ಸಾವಿರ ಕೋಟಿ ರೂ., ಮಧ್ಯಪ್ರದೇಶಕ್ಕೆ 48 ಸಾವಿರ ಕೋಟಿ ರೂ. ದೊರೆಯಲಿದೆ. ಹಾಗೆಯೇ ಪ್ರಕೃತಿ ವಿಕೋಪ ನಿಧಿಯಲ್ಲೂ ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಲಾಗಿದೆ. ನಮಗೆ 5,135 ಕೋಟಿ ರೂ., ಮಹಾರಾಷ್ಟ್ರಕ್ಕೆ 31,597 ಕೋಟಿ ರೂ., ಗುಜರಾತಿಗೆ 6,766 ಕೋಟಿ ರೂ. ಸಿಗಲಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರಿನ ಅಭಿವೃದ್ಧಿಗೆ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು, ಅನುದಾನಗಳನ್ನು ಕೇಳಿದ್ದೆವು. ನಯಾಪೈಸೆ ಕೊಡಲಿಲ್ಲ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ‘ಗ್ರಾಮೀಣಾಭಿವೃದ್ಧಿಗೆ ಮನರೆಗಾ ಸಂಜೀವಿನಿ’ ಎಂದಿದ್ದರು. ಆದರೆ ಅಂದು ಬೆಂಬಲಿಸಿದವರು ಇಂದು ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಿರೋಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಕೇಂದ್ರ ವಿತ್ತ ಸಚಿವರು ಕೃಷ್ಣಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಅನುದಾನ ನೀಡುವುದಾಗಿ ಘೋಷಿಸಿದ್ದನ್ನು ಕೊಡಲಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಲ್ಲ. 15ನೆ ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿದ್ದ 11,495 ಕೋಟಿ ರೂ.ಗಳು ರಾಜ್ಯಕ್ಕೆ ನೀಡಲಿಲ್ಲ. 14ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೊಡುತ್ತಿದ್ದ ಶೇ.4.71ರಷ್ಟು ತೆರಿಗೆ ಹಂಚಿಕೆ ಪ್ರಮಾಣವನ್ನು 15ನೆ ಆಯೋಗದಲ್ಲಿ ಶೇ.3.64ಕ್ಕೆ ಇಳಿಸಿದ್ದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ 1.25 ಲಕ್ಷ ಕೋಟಿ ರೂ.ಕೊರತೆ ಉಂಟಾಯಿತು. ರಾಜ್ಯದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಕೊಟ್ಟರೆ, ನಮಗೆ ಕೇವಲ 55 ರಿಂದ 60 ಸಾವಿರ ಕೋಟಿ ರೂ. ಬರುತ್ತದೆ ಎಂದು ಅವರು ಹೇಳಿದರು.







