ಯುವಕರು ಕೃಷಿಯತ್ತ ಮರಳಬೇಕು; ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರಕಾರ ಬದ್ಧ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ನಗರದ ಓಕಳೀಪುರಂನಲ್ಲಿ ರೇಶ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಇ-ರೇಶ್ಮೆ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರೇರೇಶ್ಮೆ ಮೇಲೆ 1.50ಲಕ್ಷ ಕುಟುಂಬಗಳು ಇದರ ಮೇಲೆ ಅವಲಂಬಿಸಿದ್ದು, ರೇಶ್ಮೆ ಲಾಭದಾಯಕವಾದ ಕಸುಬು. ಅದಕ್ಕಾಗಿಯೇ ಹೆಚ್ಚು ಜನ ವ್ಯವಸಾಯದ ಜೊತೆಗೆ ಉಪಕಸುಬು ಮಾಡಬೇಕು ಎಂದರು.
ಕೃಷಿಯಿಂದ ವಿಮುಖರಾಗುತ್ತಿರುವ ಯುವಜನಾಂಗವನ್ನು ಪುನಃ ಸೆಳೆಯಲು ರೇಶ್ಮೆ ತೋಟಗಾರಿಕೆ, ಪಶುಸಂಗೋಪನೆಗೆ ಸರಕಾರ ಒತ್ತು ನೀಡುತ್ತಿದೆ. ಬೈವೋಲ್ಟೀನ್ ರೇಶ್ಮೆಗೆ ಬೇಡಿಕೆ ಹೆಚ್ಚಾಗಿದ್ದು, ನಮ್ಮ ಸರಕಾರದ ಅವಧಿಯಲ್ಲಿ ಸಾಗಾಣಿಕೆ ವೆಚ್ಚವನ್ನು 10ರಿಂದ 20ರೂ.ಗಳಿಗೆ ಹೆಚ್ಚಿಸಲಾಯಿತು ಮತ್ತು ಬೈವೋಲ್ಟೀನ್ ಬೆಳೆಯಲು ಹೆಚ್ಚಿನ ನೆರವನ್ನು ನೀಡಲು ಬದ್ಧವಾಗಿದೆ ಎಂದರು.
ಕಚ್ಚಾ ರೇಶ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಹಾಗೂ ಕಾಫಿ ಉತ್ಪಾದನೆಯಲ್ಲಿಯೂ ಮೊದಲ ಸ್ಥಾನದಲ್ಲಿದ್ದೇವೆ ಅವರು ವಿವರಿಸಿದರು.
ಇತರೆ ಇಲಾಖೆಗಳಿಗೂ ಸ್ಥಳಾವಾಕಾಶ: ಓಕಳೀಪುರಂನಲ್ಲಿರುವ 4 ಎಕರೆ 25 ಗುಂಟೆ ವಿಸ್ತೀರ್ಣದ ಈ ಸ್ಥಳ ರೇಶ್ಮೆ ಇಲಾಖೆಗೆ ಸೇರಿದ್ದು 1995ರಲ್ಲಿ ಇದನ್ನು ಖರೀದಿಸಲಾಗಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ರೇಶ್ಮೆ ಭವನದ ಅಗತ್ಯತೆಯನ್ನು ಮನಗಂಡು ಸ್ಥಳವನ್ನು ರೇಶ್ಮೆ ಇಲಾಖೆ ಕೊಟ್ಟರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಮೈಸೂರು ಖನಿಜ ಕಾರ್ಪೊ ರೇಷನ್ ವತಿಯಿಂದ ಭವನ ನಿರ್ಮಾಣ ಮಾಡುವುದು ಎಂದು ತೀರ್ಮಾನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ರೇಶ್ಮೆ ಇಲಾಖೆಯ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯವಿರುವಷ್ಟು ಸ್ಥಳವನ್ನು ಬಳಸಿಕೊಂಡು ಇತರೆ ಇಲಾಖೆಗಳಿಗೂ ಸ್ಥಳಾವಾಕಾಶವನ್ನು ಮಾಡಿಕೊಡುವಂತೆ ಸೂಚಿಸಲಾಗಿದೆ ಎಂದರು.
3 ವರ್ಷಗಳಲ್ಲಿ ಕಾಮಗಾರಿ ಪೂರ್ಣ: ಒಟ್ಟು 666 ಕೋಟಿ ರೂ.ಗಳಿಗೆ ಟೆಂಡರ್ ಆಗಿದ್ದು, ಮೂರು ವರ್ಷಗಳ ಅವಧಿಯಲ್ಲಿ ಕಟ್ಟಡ ನಿರ್ಮಾಣವಾಗಬೇಕು. 13 ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಿದ್ದು ಕಟ್ಟಡ ಸದೃಢವಾಗಿರಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಗುತ್ತಿಗೆದಾರರಿಗೆ ಸಿಎಂ ಸೂಚಿಸಿದರು. ಮೂರು ವರ್ಷಗಳ ಕಾಲಮಿತಿಯಲ್ಲಿ ಕಟ್ಟಡ ಮುಗಿಯದಿದ್ದರೆ ನಿಮ್ಮ ವಿರುದ್ಧ ಕ್ರಮವಹಿಸಲಾಗುವುದು ಎಂದೂ ಎಚ್ಚರಿಕೆ ನೀಡಿದರು.
ಈ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಖನಿಜ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ್, ಉಪಾಧ್ಯಕ್ಷ ಎಚ್.ಲಕ್ಷ್ಮಣ್, ರೇಶ್ಮೆ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






