ಜೂನ್ 1ಕ್ಕೆ ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಸಿಎಂ ಸಿದ್ದರಾಮಯ್ಯ/ಸಚಿವ ಮಧುಬಂಗಾರಪ್ಪ
ಬೆಂಗಳೂರು : ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ಜೂನ್ 1ರಂದು ವಿಜೃಂಭಣೆಯಿಂದ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ‘ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ’ ಕುರಿತು ರಾಜ್ಯದ 46 ಸಾವಿರ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಡಿಡಿಪಿಐ, ಡಿಡಿಪಿಯು, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದರು.
ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಏಕಕಾಲದಲ್ಲಿ ನಡೆಯುವ ‘ಮಹಾ ಪೋಷಕ-ಶಿಕ್ಷಕರ ಸಭೆ'ಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದು ಅವರು ಪ್ರಕಟಿಸಿದರು.
ಕೆಪಿಎಸ್ ಶಾಲೆಗೆ ಶಂಕುಸ್ಥಾಪನೆ: ಶಾಲಾ ಪ್ರಾರಂಭೋತ್ಸವದ ಶುಭ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ‘ಕರ್ನಾಟಕ ಪಬ್ಲಿಕ್ ಸ್ಕೂಲ್' ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೆಯೇ, ರಾಜ್ಯಮಟ್ಟದಲ್ಲಿ ಶಿವಮೊಗ್ಗದಿಂದ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ ಎಂದರು.
ಅಭಿನಂದನೆ: ಇತ್ತೀಚಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ದಾಖಲಾದ ಐತಿಹಾಸಿಕ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಹಾಗೂ ಅಧಿಕಾರಿಗಳ ಹಗಲಿರುಳಿನ ಶ್ರಮವನ್ನು ಶ್ಲಾಘಿಸಿದ ಅವರು, ಇಲಾಖೆಯ 29-ಅಂಶಗಳ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಪಾರದರ್ಶಕ ಮೌಲ್ಯಮಾಪನ ಮತ್ತು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಗಳ ಮೂಲಕ ಉಚಿತವಾಗಿ ನಡೆಸಲಾದ ಪೂರ್ವಸಿದ್ಧತಾ ಪರೀಕ್ಷೆಗಳು ಈ ಸಾಧನೆಗೆ ಕಾರಣವಾಗಿವೆ ಎಂದರು.
ಹೊಸ ಶೈಕ್ಷಣಿಕ ವರ್ಷಕ್ಕೆ ಆದ್ಯತೆ: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಗರಿಷ್ಠ ಮಟ್ಟಕ್ಕೆ ಏರಿಸುವುದು ಮೊದಲ ಆದ್ಯತೆಯಾಗಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಗುರುತಿಸಿ, ಜಾಗೃತಿ ಮೂಡಿಸಿ ಮರಳಿ ಶಾಲೆಗೆ ತರಬೇಕು. ಶಾಲಾ ಬಿಸಿಯೂಟ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದರಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರವಹಿಸಬೇಕು ಎಂದು ಅವರು ಸೂಚನೆ ನೀಡಿದರು.






