ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ ಆರೆಸ್ಸೆಸ್ ನದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ

Photo: X/@siddaramaiah
ಬೆಂಗಳೂರು: ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ ಆರೆಸ್ಸೆಸ್ ನದ್ದು. ಈ ಸಿದ್ಧಾಂತ ಶ್ರಮಿಕ ಜಾತಿ, ವರ್ಗಗಳ ವಿರೋಧಿ. ಅದಕ್ಕೆ ನಾನು ಆರೆಸ್ಸೆಸ್ ಅನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಇದೇ ಕಾರಣಕ್ಕೆ ಎಲ್ಲ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಂಘದ ಕಟ್ಟಡದಲ್ಲಿ ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು ಎಂದು ಹೇಳಿದರು.
ಈಗ ಇದೇ ನೂರು ವರ್ಷದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರದೇಶ ಕುರುಬರ ಸಂಘದಿಂದ ಬೇಡಿಕೆ ಮತ್ತು ಒತ್ತಾಯ ಬಹಳ ವರ್ಷಗಳಿಂದ ಇತ್ತು. ಈಗ ಎಲ್ಲರನ್ನೂ ಒಪ್ಪಿಸಿ ಹಳೆ ಕಟ್ಟಡ ನೆಲಸಮ ಮಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಆಗಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 18 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಹಳೆ ಕಟ್ಟಡದಲ್ಲಿದ್ದ ಹಾಸ್ಟೆಲ್ ನಲ್ಲಿ ಓದಿದವರು ಒಳ್ಳೊಳ್ಳೆ ಅಧಿಕಾರಿಗಳಾಗಿದ್ದಾರೆ. ನ್ಯಾಯಮೂರ್ತಿಗಳು ಆಗಿದ್ದಾರೆ. ನಾನು 1983ರಲ್ಲಿ ಶಾಸಕ, 1984ರಲ್ಲಿ ಮಂತ್ರಿ ಆದೆ. ನಾನು ಸಾರಿಗೆ ಮಂತ್ರಿ ಆಗಿದ್ದಾಗ 1988ರಲ್ಲೆ ಕನಕದಾಸರ 500ನೆ ಜಯಂತ್ಯುತ್ಸವವನ್ನು ಆಚರಣೆ ಮಾಡಿಸಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜಕ್ಕೊಂದು ಗುರುಪೀಠ ಬೇಕು ಎಂದು ತೀರ್ಮಾನಿಸಿದೆ. ಆಗ ಸಂಘದ ಕಟ್ಟಡದ ಮೇಲೆ 3 ಕೋಟಿ ರೂಪಾಯಿ ಸಾಲ ಇತ್ತು. ಆ ಸಾಲದ ಸುಳಿಯಿಂದ ಸಂಘವನ್ನು ಬಿಡಿಸಿದ್ದು ನಾವು. ಇದು ಇತಿಹಾಸ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಹೊಸ ಕಟ್ಟಡದಲ್ಲೂ ಹಾಸ್ಟೆಲ್ ಇರಲಿದೆ. ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ ಐದನೇ ತರಗತಿಗೆ ಸೇರಿಸದೇ ಹೋಗಿದ್ದರೆ ನಾನು ವಕೀಲನೂ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಬಳಿಕ ಪ್ರೊ.ನಂಜುಂಡಸ್ವಾಮಿ ಅವರ ಕಾರಣದಿಂದ ರಾಜಕೀಯಕ್ಕೆ ಬಂದೆ ಎಂದು ಅವರು ತಿಳಿಸಿದರು.
ನಾನು ರಾಜಕಾರಣಕ್ಕೆ ಬರದೆ ಹೋಗಿದ್ದರೆ ಕುರುಬರ ಸಂಘದ ಕಟ್ಟಡವೂ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠವೂ ಆಗುತ್ತಿರಲಿಲ್ಲ, ರಿಯಲ್ ಎಸ್ಟೇಟ್ ರೌಡಿಗಳಿಂದ ಬೈರಪ್ಪನ ಗುಡಿ ಮತ್ತು ಸಮಾಜದ ಭೂಮಿ, ಕಟ್ಟಡಗಳನ್ನು ಉಳಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಇತಿಹಾಸದ ಘಟನೆಗಳನ್ನು ಒಂದೊಂದಾಗಿ ಸಿದ್ದರಾಮಯ್ಯ ವಿವರಿಸಿದರು.
ಸರಕಾರದಿಂದ 600 ಕುರುಬ ಸಮುದಾಯ ಭವನಗಳನ್ನು ಮಾಡಲು ಮುಂದಾಗಿದ್ದು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಸೇರಿ ರಾಜ್ಯದ ಹತ್ತು ಹಲವು ಕಡೆಗಳಲ್ಲಿ ಸಂಘಕ್ಕೆ ಜಾಗ-ಕಟ್ಟಡ ಉಳಿಸಿಕೊಟ್ಟಿದ್ದೇನೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮಾಡಿದ್ದು ನಾನೇ, ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾನೇ ಎಂದು ಅವರು ಹೇಳಿದರು.
ಈಗ ನನಗೂ ಮುಕುಡಪ್ಪನಿಗೂ ಆಗುವುದಿಲ್ಲ. ಆದರೆ ಕುರುಬ ಸಮಾಜಕ್ಕೆ ಆಸ್ತಿ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಮುಕುಡಪ್ಪ ಸೇರಿ ಶಿವಣ್ಣ, ಮಾಸ್ತಿ, ಸಿದ್ದಲಿಂಗಯ್ಯ, ನಾಗಣ್ಣ ರೀತಿಯ ಹಲವರು ಜೊತೆಗೆ ನಿಂತು ಸಹಕಾರ ಮಾಡಿದರು. ಈ ಇತಿಹಾಸ ಗೊತ್ತಿದ್ದವರು ಬಹಿರಂಗವಾಗಿ ಮಾತನಾಡಬೇಕಿತ್ತು. ಅವರು ಯಾರೂ ಮಾತನಾಡದ ಕಾರಣಕ್ಕೆ, ನಾನು ಮಾತನಾಡಬಾರದು ಅಂದುಕೊಂಡಿದ್ದೆ. ಆದರೆ, ಈಗ ಎಲ್ಲವನ್ನೂ ಮಾತನಾಡಬೇಕಾಗಿ ಬಂತು ಎಂದು ಸಿದ್ದರಾಮಯ್ಯ ತಿಳಿಸಿದರು.
ನಾನು ಕೇವಲ ಕುರುಬ ಸಮಾಜಕ್ಕೆ ಮಾತ್ರ ಇಷ್ಟು ಮಾಡಲಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲ ಶೋಷಿತ ಸಮುದಾಯಗಳ ಏಳಿಗೆಗೂ ಕೆಲಸ ಮಾಡಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಭಾಗ್ಯಗಳು, ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಜಾರಿಗೆ ತಂದ ಗ್ಯಾರಂಟಿಗಳು ಎಲ್ಲ ಜಾತಿಯ ಬಡವರಿಗಾಗಿ ಜಾರಿ ಆಗಿದೆ. ಸರ್ವರನ್ನೂ ಒಳಗೊಂಡ, ಸರ್ವರ ಅಭಿವೃದ್ಧಿಯ ಸಮಾಜ ನಿರ್ಮಾಣ ನನ್ನ ಗುರಿ ಎಂದು ಮುಖ್ಯಮಂತ್ರಿ ಹೇಳಿದರು.
ಅದಕ್ಕೆ ರಾಜ್ಯದ ಎಲ್ಲ ಜಾತಿಯ, ಎಲ್ಲ ವರ್ಗದ, ಎಲ್ಲ ಧರ್ಮದ ಜನರೂ ನನ್ನನ್ನು ಪ್ರೀತಿಸುತ್ತಾರೆ. ಹೀಗಾಗಿ ನಾನು ನಮ್ಮ ಜಾತಿ ಸೇರಿ ಸಮಾಜದ ಎಲ್ಲ ಜಾತಿ, ಧರ್ಮದವರ ಆಶೀರ್ವಾದಕ್ಕಾಗಿ ಋಣಿ ಎಂದು ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದರು.
ಜೀವಬೆದರಿಕೆಯಿಂದ ಸಂಘದ ಚುನಾವಣೆವರೆಗೂ: ಹಿಂದೆ ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು. ನಾನು ಹೆದರಲಿಲ್ಲ. ಕುರುಬರ ಸಂಘದ ವಿಚಾರದಲ್ಲಿ ಭಾಗಿ ಆಗದಂತೆ ನನಗೆ ಬೆದರಿಕೆ ಇತ್ತು. ಆದರೂ ನಾನು ಹೆದರದೆ ಗ್ರಾಮೀಣ ಭಾಗದ ಸಂಘದ ನಿರ್ದೇಶಕರ ಬೆಂಬಲದಲ್ಲಿ ದಾವಣಗೆರೆಯ ಮಲ್ಲಪ್ಪ ಅವರನ್ನು ರೌಡಿ ಪುಟ್ಟಸ್ವಾಮಿ ವಿರುದ್ಧ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲಿಸಿದೆ. ಪುಟ್ಟಸ್ವಾಮಿ ನ್ಯಾಯಾಲಯಕ್ಕೆ ಹೋದರೂ ತೀರ್ಪು ನಮ್ಮ ಪರವಾಗಿ ಬಂತು. ಹೀಗೆ ಸಂಘವನ್ನು ನಾನು ಉಳಿಸಿದೆ ಎಂದು ಅವರು ಮೆಲುಕು ಹಾಕಿದರು.
ಬಳಿಕ ನನ್ನ ಹಳೆ ಕಾರಲ್ಲಿ ಇಡಿ ರಾಜ್ಯ ಸುತ್ತಿ ಸಮಾಜವನ್ನು ಸಂಘಟಿಸಿದೆ. ತಾರಾಕಾನಂದರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದ್ದು ನಾನೇ. ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರನ್ನು ಮತ್ತು ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ಅವರನ್ನು ಕರೆಸಿ ಪೀಠಕ್ಕೆ ಚಾಲನೆ ನೀಡಲಾಯಿತು. ಹೀಗೆ ಕುರುಬರ ಸಂಘ ಮತ್ತು ಕುರುಬ ಸಮಾಜದ ಪೀಠವನ್ನು ಉಳಿಸಿದ್ದು ನಾನು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸುತ್ತಿ ಸಮಾಜದ ಸಂಘಟಿಸಿದ್ದು ನಾನು, ಮುಕುಡಪ್ಪ, ಮಾಸ್ತಿ ಮತ್ತು ಇತರರು. ಆಮೇಲೆ ವಿಶ್ವನಾಥ್ ಅವರನ್ನು ಪೀಠದ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದುದರಿಂದ, ಇಡೀ ಸಮಾಜ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಸಮಾಜಕ್ಕೆ ಏನು ಮಾಡಿದ್ದೇನೆ ಎನ್ನುವ ಚರಿತ್ರೆಯನ್ನು ಮನದಟ್ಟು ಮಾಡಿಕೊಳ್ಳಬೇಕು. ಗುರುಪೀಠ ನಾನು ಮಾಡಿದ್ದು ಎಂದು ನಿರಂಜನಾನಂದಪುರಿ ಸ್ವಾಮೀಜಿಗೆ ಹೆದರಿಸುವವರು ಇತಿಹಾಸ ತಿರುಚುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವರ್ತೂರು ಪ್ರಕಾಶ್, ಪರಿಷತ್ ಸದಸ್ಯ ಅನಿಲ್ ಕುಮಾರ್, ರಘುನಾಥ್ರಾವ್ ಮಲ್ಕಾಪುರೆ, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







