ಆಯವ್ಯಯ ಮಂಡನೆಗೆ ಸಿದ್ಧತೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ
ಬೆಂಗಳೂರು : ವಿಧಾನ ಮಂಡಲ ಜಂಟಿ ಅಧಿವೇಶನದ ಬೆನ್ನಲ್ಲೇ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಮಂಡನೆಗೆ ಸರಣಿಯಾಗಿ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ.
ಗುರುವಾರ ಇಲ್ಲಿನ ರೇಸ್ಕೋರ್ಸ್ ಶಕ್ತಿ ಭವನದಲ್ಲಿ ಅರಣ್ಯ, ಕಾನೂನು-ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ, ತೋಟಗಾರಿಕೆ, ಗಣಿ ಭೂ ವಿಜ್ಞಾನ, ಕಾರ್ಮಿಕ, ಒಳಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳು, ಉನ್ನತ ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಚರ್ಚೆ ಸಮಾಲೋಚನೆ ನಡೆಸಿದರು.
ಮಾರ್ಚ್ 6ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ತಮ್ಮ ದಾಖಲೆಯ 17ನೆ ಬಜೆಟ್ ಅನ್ನು ಮಂಡಿಸಲಿದ್ದಾರೆ. ಅದಕ್ಕೆ ಪೂರ್ವ ಭಾವಿಯಾಗಿ ಇಂದಿನಿಂದ ಬಜೆಟ್ ತಯಾರಿಕೆಗೆ ಚಾಲನೆ ನೀಡಿದ್ದಾರೆ.
2026-27ನೆ ಸಾಲಿಗೆ ಘೋಷಣೆ ಮಾಡಬೇಕಾದ ಹೊಸ ಯೋಜನೆಗಳ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಹಿಂದಿನ ಬಜೆಟ್ನಲ್ಲಿ ಘೋಷಿಸಲಾದ ಯೋಜನೆಗಳು, ಅನುದಾನ ಬಿಡುಗಡೆ ಮತ್ತು ವೆಚ್ಚವಾಗಿರುವ ಹಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಣಾಳಿಕೆಯಲ್ಲಿನ ಭರವಸೆಗಳು, ಬಜೆಟ್ನಲ್ಲಿ ಅವುಗಳ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಚರ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳು ಯಶಸ್ವಿಯಾದ ಬಳಿಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಹೊಸದಾಗಿ ಯಾವ ಯೋಜನೆಗಳನ್ನು ನೀಡಲಿದ್ದಾರೆ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.






