ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಕುರಿತು ತಮಿಳುನಾಡಿನ ಕ್ರಮ ಪರಿಶೀಲಿಸಲು ಮುಖ್ಯಕಾರ್ಯದರ್ಶಿಗೆ ಸಿಎಂ ಸೂಚನೆ

ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ: ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಂಡಿಗಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಿ ಜಾಗದಲ್ಲಿ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ, ಆ ರೀತಿ ಕ್ರಮ ಕೈಗೊಳ್ಳಲು ಪರಿಶೀಲಿಸುವಂತೆ ಸೂಚಿಸಿದ್ದೇನೆ" ಎಂದರು.
ಸಂಪುಟ ಪುನರ್ ರಚನೆಗೂ ಇಂದಿನ ಭೋಜನಕೂಟಕ್ಕೂ ಸಂಬಂಧವಿಲ್ಲ:
ರಾಜ್ಯದಲ್ಲಿ ಬದಲಾವಣೆಯಲ್ಲಿ ಹೈಕಮಾಂಡ್ ನವರ ನಿರ್ಧಾರವೇ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪಕ್ಷದ ವರಿಷ್ಠರ ಮತ್ತು ಶಾಸಕರ ಅಭಿಪ್ರಾಯ ಬಹಳ ಮುಖ್ಯ. ಶಾಸಕರ ಒಮ್ಮತ ಹಾಗೂ ಹೈಕಮಾಂಡ್ ನ ಆರ್ಶೀವಾದವಿರಬೇಕು. ಇಂದಿನ ಭೋಜನಕೂಟ ಕಾರ್ಯಕ್ರಮದಲ್ಲಿ ಯಾವುದೇ ವಿಶೇಷತೆ ಇಲ್ಲ. ಸಂಪುಟ ಪುನರ್ ರಚನೆಗೂ ಇಂದಿನ ಭೋಜನಕೂಟಕ್ಕೂ ಯಾವುದೇ ಸಂಬಂಧವಿಲ್ಲ. ನವೆಂಬರ್ ತಿಂಗಳಲ್ಲಿ ಯಾವುದೇ ಕ್ರಾಂತಿಯೂ ಇಲ್ಲ ಎಂದರು.
ವಾಲ್ಮೀಕಿ ಸಮಾಜದವರಿಗೆ ಸಚಿವ ಸ್ಥಾನ ನೀಡಲಾಗುವುದೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಶಾಸಕರು ರಾಜಿನಾಮೆ ನೀಡಿದ್ದು, ಸರ್ಕಾರ ಅವರನ್ನು ತೆಗೆದುಹಾಕಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.







