ʼಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆʼ : ಗೊಂದಲಗಳಿಗೆ ತೆರೆ ಎಳೆದ ಸಿಎಂ, ಡಿಸಿಎಂ

ಬೆಂಗಳೂರು : ʼಅಧಿಕಾರ ಹಂಚಿಕೆ ಚರ್ಚೆʼ ಮಧ್ಯೆ ಹೈಕಮಾಂಡ್ ಸೂಚನೆಯಂತೆ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮಂತ್ರಿ ಡಿ.ಕೆ.ಶಿವಕುಮಾರ್ ಮುಖಿಮಾಖಿಯಾಗಿ, ಮಾತುಕತೆ ನಡೆಸಿದರು.
ಕಳೆದ ಒಂದು ವಾರದಿಂದ ಅಧಿಕಾರ ಹಂಚಿಕೆಯ ಗದ್ದಲ, ಬಣ ರಾಜಕೀಯ, ಉಭಯ ನಾಯಕರ ಮುಸುಕಿನ ಗುದ್ದಾಟದ ಮಧ್ಯೆ ಇಂದು ಉಭಯ ನಾಯಕರು ಒಟ್ಟಿಗೆ ಉಪಹಾರ ಸಭೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿತ್ತು. ಕಾವೇರಿ ನಿವಾಸದಲ್ಲಿ ಉಭಯ ನಾಯಕರು ಸುಮಾರು 40 ನಿಮಿಷಗಳ ಕಾಲ ಉಪಹಾರ ಸಭೆ ನಡೆಸಿದ್ದರು.
‘ಕಾವೇರಿ’ ನಿವಾಸದಲ್ಲಿ ಉಪಹಾರ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ವರಿಷ್ಠರ ತೀರ್ಮಾನ, ಸೂಚನೆಯಂತೆ ನಡೆದುಕೊಳ್ಳುತ್ತೇವೆ : ಸಿಎಂ
ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದು ನಾನು ಹಾಗೂ ಡಿ.ಕೆ.ಶಿವಕುಮಾರ್ ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಲಿ ಸರಕಾರದ ವಿರುದ್ಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲಗಳನ್ನು ತಿಳಿಗೊಳಿಸುವ ಕೆಲಸ ಮಾಡಲು ಸೂಚಿಸಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ. ಈಗಲೂ ಇಲ್ಲ . ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡಿಗೆ ಮಾಹಿತಿ ನೀಡಲಾಗುವುದು ಎಂದರು.
ಆದರೆ ಗೊಂದಲ ಸೃಷ್ಟಿಯಾಗಿದೆ. ಕೆಲವು ಮಾಧ್ಯಮಗಳು ಇದನ್ನು ಸೃಷ್ಟಿಸಿದ್ದಾರೆ. ಕೆಲವು ಶಾಸಕರು ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿದರಬಹುದು. ಹಾಗೆಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕೆಲವರು ಇಂಥ ಕಾರಣಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣವಾಗಿವೆ. ನಾವು ಈ ಬಗ್ಗೆ ಮಾತನಾಡಿದ್ದೇವೆ. 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ, ತಾಲ್ಲೂಕು , ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳು ಬಹಳ ಮುಖ್ಯವಾಗಿದ್ದು, ಈ ಬಗ್ಗೆ ಚರ್ಚೆ ಮಾಡಿದ್ದೇವೆ. 2028ರಲ್ಲಿ ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಚರ್ಚಿಸಲಾಗಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದಂತೆಯೇ ಮುಂದೆಯೂ ಒಟ್ಟಿಗೆ ಸಾಗುವ ತೀರ್ಮಾನ ಮಾಡಿದ್ದೇವೆ ಎಂದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದೆ. ನಾವು ವಿರೋಧ ಪಕ್ಷದವರನ್ನು ಸಮರ್ಥವಾಗಿ ಎದುರಿಸಿದ್ದೇವೆ ಮುಂದೆಯೂ ಎದುರಿಸುತ್ತೇವೆ. ಅಪಪ್ರಚಾರ, ಸುಳ್ಳು ಆರೋಪಗಳನ್ನು, ಅಪವಾದಗಳನ್ನು ಮಾಡುವುದು ಬಿಜೆಪಿ ಹಾಗೂ ಜೆಡಿಎಸ್ ಅವರ ಚಾಳಿ. ಇವರಿಬ್ಬರನ್ನೂ ಸಮರ್ಥವಾಗಿ ನಾನು ಮತ್ತು ಉಪಮುಖ್ಯಮಂತ್ರಿಗಳು ಎದುರಿಸುತ್ತೇವೆ. ಅದಕ್ಕೆ ಅಗತ್ಯವಿರುವ ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದ್ದೇವೆ ಎಂದರು.
ನಮ್ಮಲ್ಲಿ ಯಾವುದೇ ಗುಂಪು ಇಲ್ಲ : ಡಿಸಿಎಂ
"ನಾಯಕತ್ವ ವಿಚಾರದಲ್ಲಿ ನನ್ನದು ಹಾಗೂ ಸಿಎಂ ಸಿದ್ದರಾಮಯ್ಯ ಅವರದ್ದು ಒಂದೇ ರಾಜಕೀಯ ನಿಲುವಾಗಿದ್ದು, ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರು ನಡೆಯುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
"ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷ ಕಷ್ಟದ ಸಮಯದಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಹತ್ತರ ಪಾತ್ರ ನಿರ್ವಹಿಸಲಿದೆ. 2028ರ ಚುನಾವಣೆ ನಂತರ 2029ರ ಲೋಕಸಭೆ ಚುನಾವಣೆಯನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಎದುರಿಸುತ್ತೇವೆ. ರಾಜ್ಯದಲ್ಲಿ 2028ಕ್ಕೆ ಹಾಗೂ 2029ರಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಇಷ್ಟು ದಿನ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಮುಂದೆಯೂ ಅದೇ ರೀತಿ ಕೆಲಸ ಮಾಡಲು ಅಚಲ ನಿರ್ಧಾರ ಕೈಗೊಂಡಿದ್ದೇವೆ" ಎಂದು ತಿಳಿಸಿದರು.
"ಇಂದು ನಾನು ಹಾಗೂ ಸಿಎಂ ಅವರು ಉಪಹಾರ ಕೂಟದಲ್ಲಿ ಭಾಗವಹಿಸಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಭೋಜನಕೂಟಕ್ಕೆ ಬರಲಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದ, ನಿಮ್ಮೆಲ್ಲರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ಕೊಟ್ಟ ಮಾತಿನಂತೆ ಜನರ ಸೇವೆ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಸಹಕಾರ ನೀಡುತ್ತಿದ್ದಾರೆ. ಜನರ ನಿರೀಕ್ಷೆ, ಆಕಾಂಕ್ಷೆ, ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದು, ಹೈಕಮಾಂಡ್ ತೀರ್ಮಾನದಂತೆ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.
"ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ಕೃಷ್ಣ ಅವರ ಕಾಲದಲ್ಲೂ ಗುಂಪುಗಾರಿಕೆ ಮಾಡಿಲ್ಲ. ಇವತ್ತಿಗೂ ಅವಕಾಶ ಕೊಟ್ಟಿಲ್ಲ. ನನಗೆ ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೊದಲ ಆರು ತಿಂಗಳು ನನ್ನನ್ನು ಮಂತ್ರಿ ಮಾಡದೇ ಇದ್ದಾಗಲೂ ನಾನು ಒಂದೇ ಒಂದು ಮಾತನ್ನೂ ಆಡಿರಲಿಲ್ಲ. ಒಟ್ಟಾಗಿ ಕೆಲಸ ಮಾಡುವ ನನ್ನ ನಿರ್ಧಾರ ಅಚಲ. ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು, ಪ್ರತಿಯೊಬ್ಬ ಶಾಸಕರಿಗೆ ಶಕ್ತಿ ತುಂಬಿ, ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವುದು ನಮ್ಮಿಬ್ಬರ ಕರ್ತವ್ಯ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಅನೇಕ ಕಾರ್ಯಕ್ರಮ ರೂಪಿಸಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ನೀಡಿರುವ ಸಂದೇಶಕ್ಕೆ ನನ್ನ ಸಹಮತವಿದೆ" ಎಂದರು.







