ರಾಜ್ಯದ ಇತಿಹಾಸದಲ್ಲೆ ಅತಿಹೆಚ್ಚು ಸಾಲ ಪಡೆದ ಸಿಎಂ ಸಿದ್ದರಾಮಯ್ಯ: ಬೊಮ್ಮಾಯಿ ಆರೋಪ

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಕಳೆದ ಎರಡು ವರ್ಷ ಆರ್ಥಿಕವಾಗಿ ಕರಾಳ ದಿನಗಳು. ಕಳೆದ ಎರಡು ವರ್ಷದಲ್ಲಿ ಎರಡೂವರೆ ಲಕ್ಷ ಕೋಟಿ ರೂ.ಸಾಲ ಪಡೆದಿರುವುದೇ ರಾಜ್ಯ ಸರಕಾರದ ಸಾಧನೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಪಡೆದ ಖ್ಯಾತಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯ ಸರಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸರಕಾರ ಸಂಪೂರ್ಣವಾಗಿ ಸಾಲದ ಮೇಲೆ ಅವಲಂಬನೆಯಾಗಿದೆ. ಅದರ ಜೊತೆಗೆ ಪೆಟ್ರೋಲ್, ಡಿಸೇಲ್, ಅಬಕಾರಿ, ಹಾಲು, ನೀರು, ಸ್ಟಾಂಪ್ ಡ್ಯೂಟಿ ಎಲ್ಲದರ ಮೇಲೆ ಅತಿ ಹೆಚ್ಚು ತೆರಿಗೆ ಹಾಕಿದ ಖ್ಯಾತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಕಳೆದ ವರ್ಷ 40 ಸಾವಿರ ಕೊಟಿ ರೂ. ಹೆಚ್ಚುವರಿ ತೆರಿಗೆ ಹಾಕಿದ್ದರು. ಈ ವರ್ಷ 60 ಸಾವಿರ ಕೋಟಿ ರೂ.ಹೊಸ ತೆರಿಗೆ ಭಾರ ಜನರ ಮೇಲೆ ಹಾಕಿದ್ದಾರೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ನಿಂತಿದೆ. ಯಾವುದೇ ನಿರಾವರಿ ಯೋಜನೆ, ರಾಜ್ಯ ಹೆದ್ದಾರಿ, ಮನೆ ಕಟ್ಟಲು ರಾಜ್ಯ ಸರಕಾರ ಹಣ ನೀಡಿಲ್ಲ, ಕೇಂದ್ರದ ಹಣಕ್ಕೆ ಸಮನಾದ ವಂತಿಗೆಯನ್ನು ಬಿಡುಗಡೆ ಮಾಡುತ್ತಿಲ್ಲ. ಗ್ಯಾರೆಂಟಿ ನೆಪದಲ್ಲಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುವ ಕೆಲಸ ಈ ಸರಕಾರ ಮಾಡಿದೆ ಎಂದು ಅವರು ಕಿಡಿಗಾರಿದ್ದಾರೆ.
ಸರಕಾರ ಸಾಮಾನ್ಯ ಜನರ ಬಾಯಲ್ಲಿ ಒಂದು ಶಾಪವಾಗಿ ಪರಿಣಮಿಸಿದೆ. ಕರ್ನಾಟವನ್ನು ಅಭಿವೃದ್ಧಿ ಮಾಡುವುದಿರಲಿ, ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿ ಮಾಡಿರುವುದು ಅತ್ಯಂತ ದುರ್ದೈವ. ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಜನರು ಕೇಳುತ್ತಿದ್ದಾರೆ. ಇದೊಂದು ಅಭಿವೃದ್ಧಿ ಶೂನ್ಯ ಜನವಿರೋಧಿ ಅತ್ಯಂತ ಭ್ರಷ್ಟ ಸರಕಾರ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.