ದಾದಿಯರ ನೋಂದಣಿಗಾಗಿ ವಿಶೇಷ ಡಿಜಿ ಲಾಕರ್ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕ ರಾಜ್ಯ ಶುಶ್ರೂಷಕ ಪರಿಷತ್ತು ವತಿಯಿಂದ ದಾದಿಯರ(ನರ್ಸ್) ನೋಂದಣಿಗಾಗಿ ವಿಶೇಷ ಡಿಜಿಲಾಕರ್ ಆಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ದೇಶದಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ನಮ್ಮ ರಾಜ್ಯದಲ್ಲೇ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‍ನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ‘ವಿಶ್ವ ಯುವ ಕೌಶಲ್ಯ ದಿನಾಚರಣೆ’ ಅಂಗವಾಗಿ ‘ವಿಶ್ವ ಕೌಶಲ್ಯ ಸ್ಪರ್ಧೆಯ ವಿಜೇತರಿಗೆ ಸನ್ಮಾನ’ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷಕ ಪರಿಷತ್ತು ವತಿಯಿಂದ ‘ನರ್ಸ್‍ಗಳಿಗೆ ಡಿಜಿಲಾಕರ್ ನೋಂದಣಿ ಪ್ರಮಾಣಪತ್ರ ವಿತರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನರ್ಸ್‍ಗಳಿಗೆ ಆಧಾರ್ ಆಧಾರಿತ ಡಿಜಿಲಾಕರ್ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣಪತ್ರಗಳನ್ನು ನೀಡಲು ಅನುಕೂಲವಾಗುವ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಈ ವ್ಯವಸ್ಥೆಯನ್ನು ಯುಐಡಿಎಐ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ(ಆರ್‌ಜಿಯುಎಚ್‍ಎಸ್) ಮತ್ತು ಕರ್ನಾಟಕ ರಾಜ್ಯ ಶುಶ್ರೂಷಕ ಪರಿಷತ್ತಿನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇ-ಕೆವೈಸಿ ಮೂಲಕ ಆಧಾರ್ ಸರ್ವರ್‌ನಿಂದ ದಾದಿಯರ ವೈಯಕ್ತಿಕ ಡೇಟಾ, ವಿಳಾಸ, ಫೋಟೋ ಮತ್ತು ಇತರ ವಿವರಗಳನ್ನು ನೇರವಾಗಿ ಪಡೆಯಬಹುದು. ಈ ಹಿಂದೆ, ವಿವಿಧ ಜಿಲ್ಲೆಗಳ ನರ್ಸಿಂಗ್ ಅಭ್ಯರ್ಥಿಗಳು ನೋಂದಣಿಗಾಗಿ ಬೆಂಗಳೂರಿನಲ್ಲಿರುವ ಕೌನ್ಸಿಲ್‍ನ ಕೇಂದ್ರ ಕಚೇರಿಗೆ ಪ್ರಯಾಣಿಸಬೇಕಾಗಿತ್ತು. ಈಗ ಡಿಜಿಲಾಕರ್ ಮೂಲಕ ನೋಂದಣಿ ಪ್ರಮಾಣಪತ್ರಗಳನ್ನು ನೇರವಾಗಿ ದಾದಿಯರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಓದುತ್ತಿರುವ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಪ್ರಯತ್ನ ನಡೆಸುತ್ತಿದ್ದು, ಶಿಕ್ಷಣ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ರಾಜ್ಯದ ಯುವಕರಿಗೆ ವೃತ್ತಿ ಕೌಶಲ್ಯವನ್ನು ಒದಗಿಸಲು ನಮ್ಮ ಸರಕಾರವು ಬದ್ದವಾಗಿದ್ದು, ಮಲ್ಟಿ ಸ್ಕಿಲ್ ಡೆವೆಲಪ್‍ವೆಂಟ್ ಸೆಂಟರ್ ಸ್ಥಾಪಿಸುವ ಮೂಲಕ ಯುವರಿಗೆ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಸೆಂಟರ್‌ನಲ್ಲಿ ಈಗಾಗಲೇ 2,90,000 ಪದವೀಧರರು ಹಾಗೂ ಡಿಪ್ಲೋಮಾ ಶಿಕ್ಷಣ ಮುಗಿಸಿದವರು ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 2,18,000 ಯುವಕರು ಯುವನಿಧಿಯನ್ನು ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ನಾವು ಪದವೀಧರರಿಗೆ ಹಣವನ್ನು ನೀಡಿದರೆ ಸಾಲದು, ಅವರಿಗೆ ಕೌಶಲ್ಯವನ್ನು ನೀಡಬೇಕು. ಹೀಗಾಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುತ್ತಿದ್ದೇವೆ. ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ವಿದೇಶದಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದೇವೆ. ಇದರಿಂದ ನಮ್ಮ ಮಕ್ಕಳಿಗೆ ವಿದೇಶದಲ್ಲಿಯೂ ಕೆಲಸ ದೊರೆಯುವಂತಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೋಷಿನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವ ಕೌಶಲ್ಯ ದಿನದಂದು ಸಾಧಕರಿಗೆ ಸನ್ಮಾನ: ಇದೇ ವೇಳೆ ಫ್ರಾನ್ಸ್ ನ ಲಿಯಾನ್‍ನಲ್ಲಿ ನಡೆದ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ಶ್ರೇಷ್ಠತೆಯ ಪದಕಗಳನ್ನು ಗೆದ್ದ ಕರ್ನಾಟಕದ ನಾಲ್ವರು ಸ್ಪರ್ಧಿಗಳನ್ನು ಸೇರಿ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ರಾಜ್ಯದ 48 ಮಂದಿ ಸ್ಪರ್ಧಿಗಳನ್ನು ಸನ್ಮಾನಿಸಲಾಯಿತು.







