ಪೇದೆಗಳಿಗೆ ಟೋಪಿ ಬದಲಿಗೆ ಪಿ-ಕ್ಯಾಪ್ ಒದಗಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಪೇದೆಗಳು ಹಾಕುವ ಟೋಪಿಗಳ ಬದಲಿಗೆ ಪಿ-ಕ್ಯಾಪ್ ಒದಗಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ನಗರದ ಕೋರಮಂಗಲದ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಇರುವ ಕೆಎಸ್‍ಆರ್‍ಪಿ ಸಮುದಾಯ ಭವನವನ್ನು ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಬಿಎಂಆರ್‍ಸಿಎಲ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರ ವೈದ್ಯಕೀಯ ತಪಾಸಣಾ ವೆಚ್ಚವನ್ನು ಒಂದೂವರೆ ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು, ಅದನ್ನು ಹೆಚ್ಚಿಸುವ ಅಗತ್ಯ ಬಿದ್ದರೆ ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ದೊಡ್ಡದಾಗಿ ಬೆಳೆಯುತ್ತಿರುವ ನಗರ. ಎಂಟು ಪೊಲೀಸ್ ವಿಭಾಗಗಳನ್ನು 11 ವಿಭಾಗಗಳಿಗೆ ಹೆಚ್ಚಿಸಿದ್ದು, ಡಿಸಿಪಿಗಳನ್ನು ಕೂಡ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಯಾರೇ ತಪ್ಪು ಮಾಡಿದರೂ ಸರಕಾರವನ್ನೇ ದೂಷಿಸಲಾಗುತ್ತದೆ. ಅಹಿತಕರ ಘಟನೆಗಳು ನಡೆದರೆ ಸರಕಾರ ಜವಾಬ್ದಾರಿ. ಅಂಥ ಪರಿಸ್ಥಿತಿಗಳು ಬರದೇ ಹೋಗಲಿ. ಪೊಲೀಸರು ತಮ್ಮ ಕೆಲಸವನ್ನು ಸಮಾಜ ಮತ್ತು ರಾಜ್ಯದ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಪೇದೆ, ಸಹಾಯಕ ನಿರೀಕ್ಷಕರಿಗೆ ಕಡಿಮೆ ದರದಲ್ಲಿ ಭವನ ಒದಗಿಸಿ..!
ಕೆಎಸ್‍ಆರ್‍ಪಿ ಸಮುದಾಯ ಭವನ ಸುಸಜ್ಜಿತವಾಗಿದ್ದು ನಿರ್ವಹಣೆಗೆ ಅಗತ್ಯವಿರುವಷ್ಟು ಆದಾಯ ಬರುವಂತೆ ಮಾಡಿಕೊಳ್ಳಬೇಕು. ಖಾಸಗಿಯವರಿಗೆ ಸ್ವಲ್ಪ ಹೆಚ್ಚಿನ ದರದಲ್ಲಿಯೇ ನೀಡಿದರೂ ಪೊಲೀಸ್ ಪೇದೆಗಳು ಹಾಗೂ ಸಹಾಯಕ ಪೊಲೀಸ್ ನಿರೀಕ್ಷಕರಿಗೆ ಕಡಿಮೆ ದರದಲ್ಲಿ ಅಥವಾ ನಿರ್ವಹಣಾ ವೆಚ್ಚ ಪಡೆದು ಸಮುದಾಯ ಭವನವನ್ನು ಒದಗಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಪೊಲೀಸರೆ ನಮ್ಮ ಇಲಾಖೆಯ ಸಂಪತ್ತು: ಗೃಹ ಸಚಿವ ಡಾ.ಜಿ.ಪರಮೇಶ್ವರ್
ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ, ಸಾರ್ವಜನಿಕರ ಆಸ್ತಿ ರಕ್ಷಣೆ, ನಾವೆಲ್ಲ ಶಾಂತಿಯುತ ಬದುಕು ನಡೆಸಲು ಹಾಗೂ ಕರ್ನಾಟಕ ಸುಭಿಕ್ಷವಾಗಿ ಮತ್ತು ಶಾಂತಿಯಿಂದ ಇದೆ ಎಂದು ಹೇಳಲು ಪೆÇಲೀಸ್ ಕಾನ್‍ಸ್ಟೇಬಲ್‍ಗಳೇ ಕಾರಣ. ನಮ್ಮ ಇಲಾಖೆ ಮಾನವ ಸಂಪನ್ಮೂಲಗಳ ಇಲಾಖೆ. ನಮ್ಮ ಇಲಾಖೆಯಲ್ಲಿ ದೊಡ್ಡ ಯೋಜನೆಗಳಿಲ್ಲ. ಆದರೆ, ಪೊಲೀಸರೆ ನಮ್ಮ ಇಲಾಖೆಯ ಸಂಪತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.







