ಮಕ್ಕಳ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ: ʼಉಡುತೊರೆಹಳ್ಳ ನೀರಾವರಿ ಯೋಜನೆʼಗೆ 490 ಕೋಟಿ ರೂ. ಅನುದಾನ

ಸಿಎಂ ಸಿದ್ದರಾಮಯ್ಯ/ಪತ್ರ ಬರೆದ ಮಕ್ಕಳು
ಬೆಂಗಳೂರು : ಮಕ್ಕಳ ಮುಗ್ಧ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ ಸಮಸ್ಯೆ ನೀಗಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹನೂರು ಭಾಗದ ಜನರಿಗಾಗಿ 'ಉಡುತೊರೆಹಳ್ಳ ನೀರಾವರಿ ಯೋಜನೆ'ಗೆ 490 ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ ಸಮಸ್ಯೆ ಕುರಿತು ಕೆಲವು ಸಮಯದ ಹಿಂದೆ ಮಕ್ಕಳು ಪತ್ರ ಬರೆದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ನನ್ನಲ್ಲಿ ಮನವಿ ಮಾಡಿದ್ದರು. ಮಕ್ಕಳ ಕೋರಿಕೆಯ ಮೇರೆಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದಾಗ ಆ ಹಳ್ಳಿಗೆ ಸಮರ್ಪಕ ನೀರಾವರಿ ಯೋಜನೆಯೊಂದರ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್ ನಲ್ಲಿ "ಉಡುತೊರೆಹಳ್ಳ ನೀರಾವರಿ ಯೋಜನೆ"ಯನ್ನು ಘೋಷಿಸಿ, ರೂ.490 ಕೋಟಿ ಅನುದಾನವನ್ನು ಸಹ ಮೀಸಲಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಮಕ್ಕಳ ಧ್ವನಿಗೆ ಸ್ಪಂದಿಸಿದ 'ತಾಯಿ ಹೃದಯದ ಸರಕಾರ':
ಅಹವಾಲು ಸಲ್ಲಿಸಿದ ಮಕ್ಕಳ ಧ್ವನಿ ಎಳೆಯದಾದರೂ, ಅದನ್ನು ಕಡೆಗಣಿಸದೆ ಮುಕ್ತವಾಗಿ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ತಾಯಿಯ ಹೃದಯ ನಮ್ಮ ಸರಕಾರದ್ದು. ಪುಟಾಣಿ ಮಕ್ಕಳ ಧನ್ಯವಾದವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ, ನನ್ನ ಮತ್ತು ನಮ್ಮ ಸರಕಾರದ ಮೇಲೆ ವಿಶ್ವಾಸವಿಟ್ಟು ತಮ್ಮ ಕಷ್ಟವನ್ನು ನಮ್ಮ ಗಮನಕ್ಕೆ ತಂದು, ಇಂದು ಸಾವಿರಾರು ಕುಟುಂಬಗಳ ಭವಿಷ್ಯ ಬದಲಾಗಲು ಕಾರಣರಾದ ಪುಟಾಣಿಗಳಿಗೂ ಪ್ರೀತಿತುಂಬಿದ ಅಪ್ಪುಗೆಗಳು ಎಂದು ಅವರು ಪೋಸ್ಟ್ನಲ್ಲಿ ಹೇಳಿದ್ದಾರೆ.







