ಬೆಲೆ ಬೆಂಬಲ ಯೋಜನೆಯಡಿ ‘ಕಡಲೆ’ ಖರೀದಿ; ಪ್ರಧಾನಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಲಕ್ಷಾಂತರ ಕಡಲೆ ಬೆಳೆಗಾರರು ಸಂಕಷ್ಟದಲ್ಲಿದ್ದು, ತಕ್ಷಣ ಮಧ್ಯಪ್ರವೇಶ ಮಾಡಿ ಕಡಲೆಯನ್ನು ಬೆಲೆ ಬೆಂಬಲ ಯೋಜನೆ(ಪಿಎಸ್ಎಸ್)ಯಡಿ ಖರೀದಿಗೆ ಅನುಮೋದನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಡಲೆ ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದಾಗಿದ್ದು, 9.24 ಲಕ್ಷ ಹೆಕ್ಟೇರ್ನಲ್ಲಿ 6.27 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಇದು ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ ಮತ್ತು ಚಿಕ್ಕಮಗಳೂರು ಮುಂತಾದ ಪ್ರದೇಶಗಳ ರೈತರನ್ನು ಪೋಷಿಸುತ್ತದೆ. ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದಾಯದ ಏಕೈಕ ಮೂಲವಾಗಿದೆ ಎಂದು ಸಿದ್ದರಾಮಯ್ಯ ಗಮನ ಸೆಳೆದಿದ್ದಾರೆ.
2026-27ರ ರಬಿ ಮಾರುಕಟ್ಟೆ ಋತುವಿನಲ್ಲಿ ಭಾರತ ಸರಕಾರವು ಕಡಲೆಗೆ ಕ್ವಿಂಟಾಲ್ಗೆ 5,875 ರೂ. ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ) ಘೋಷಿಸಿದ್ದರೂ, ಕರ್ನಾಟಕದ ಪ್ರಮುಖ ಎಪಿಎಂಸಿಗಳಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಎಂ.ಎಸ್.ಪಿ ಗಿಂತ ಗಮನಾರ್ಹವಾಗಿ ಕಡಿಮೆಯಾಗಿದ್ದು, ಪ್ರತಿ ಕ್ವಿಂಟಾಲ್ಗೆ 4,260 ರೂ.ಗಳಿಂದ 5,813 ರೂ.ವರೆಗೆ ಇದೆ ಎಂದು ಅವರು ತಿಳಿಸಿದ್ದಾರೆ.
ಹಲವಾರು ಮಾರುಕಟ್ಟೆಗಳಲ್ಲಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತ 800–1,200 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲು ಒತ್ತಾಯಿಸಲಾಗುತ್ತಿದೆ. ಜನವರಿ ಮತ್ತು ಮಾರ್ಚ್ ನಡುವೆ ಕೊಯ್ಲು ತೀವ್ರಗೊಳ್ಳುತ್ತಿದ್ದಂತೆ, ಮತ್ತಷ್ಟು ಬೆಲೆ ಕುಸಿತವಾಗುವ ಆತಂಕವಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯ ಸಿಗದಿದ್ದರೆ, ರೈತರ ನಂಬಿಕೆ ಕ್ಷೀಣಿಸುತ್ತದೆ. ಉತ್ಪಾದನಾ ವೆಚ್ಚಗಳು, ಸಾಲ ಬಾಧ್ಯತೆಗಳು ಮತ್ತು ಮನೆಯ ಅಗತ್ಯಗಳ ಹೊರೆಯೂ ಅನೇಕ ಬೆಳೆಗಾರರನ್ನು ಸಂಕಷ್ಟದ ಮಾರಾಟಕ್ಕೆ ತಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಕಡಲೆ ಖರೀದಿಗೆ ಭಾರತ ಸರಕಾರವು ತಕ್ಷಣವೇ ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಲ್ಲದೇ, ನಾಫೆಡ್ ಮತ್ತು ಎನ್.ಸಿ.ಸಿ.ಎಫ್ ನಂತಹ ಕೇಂದ್ರ ನೋಡಲ್ ಏಜೆನ್ಸಿಗಳು ಕರ್ನಾಟಕದಲ್ಲಿ ಖರೀದಿ ಕೇಂದ್ರಗಳನ್ನು ವಿಳಂಬವಿಲ್ಲದೆ ಕಾರ್ಯಗತಗೊಳಿಸಲು ನಿರ್ದೇಶಿಸಬೇಕು ಎಂದು ಒತ್ತಾಯಿಸಿರುವ ಮುಖ್ಯಮಂತ್ರಿ, ಈ ಸಂಬಂಧ ತ್ವರಿತ ಕ್ರಮ ಕೈಗೊಳ್ಳದಿದ್ದರೆ ರೈತರ ನಷ್ಟ ಪ್ರತಿ ದಿನ ಹೆಚ್ಚುತ್ತಾ ಹೋಗುತ್ತದೆ ಮತ್ತು ಎಂ.ಎಸ್.ಪಿಯ ಉದ್ದೇಶವೆ ದುರ್ಬಲವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರವು ಬೆಲೆ ಬೆಂಬಲ ಯೋಜನೆಯ ಚೌಕಟ್ಟಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಹೊರಲು ಸಂಪೂರ್ಣವಾಗಿ ಸಿದ್ಧವಾಗಿದೆ. ಈಗಾಗಲೆ ಅಗತ್ಯ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ರಾಜ್ಯ ಸಂಸ್ಥೆಗಳನ್ನು ಗೊತ್ತುಪಡಿಸಲಾಗಿದೆ. ಬೆಲೆ ಬೆಂಬಲ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಎಲ್ಲ ಕಾರ್ಯಗಳನ್ನು ಒದಗಿಸಿದೆ ಮತ್ತು ಖರೀದಿ ಲಾಜಿಸ್ಟಿಕ್ಸ್, ರೈತರ ನೋಂದಣಿ, ಗೋದಾಮು, ಸಾರಿಗೆ ಮತ್ತು ರಾಜ್ಯ ಸುಂಕಗಳ ವಿನಾಯಿತಿಯನ್ನು ಸುಗಮಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುಗಮ ಮತ್ತು ಪಾರದರ್ಶಕ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕವು ಕೇಂದ್ರ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧವಾಗಿದೆ. ಎಂ.ಎಸ್.ಪಿಯಲ್ಲಿ ಸಂಗ್ರಹಣೆ ಕೇವಲ ಆಡಳಿತಾತ್ಮಕ ವ್ಯಾಯಾಮವಲ್ಲ, ಇದು ತನ್ನ ರೈತರ ಘನತೆಗೆ ರಾಷ್ಟ್ರದ ಬದ್ಧತೆಯ ದೃಢೀಕರಣವಾಗಿದೆ. ಈಗ ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ರಾಜ್ಯ ಮತ್ತು ಕೇಂದ್ರವು ಸಂಕಷ್ಟದ ಸಮಯದಲ್ಲಿ ಒಟ್ಟಾಗಿ ನಿಲ್ಲುತ್ತದೆ ಎಂಬ ಬಲವಾದ ಭರವಸೆಯ ಸಂದೇಶವನ್ನು ಗ್ರಾಮೀಣ ಭಾರತಕ್ಕೆ ಕಳುಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದುದರಿಂದ, ನೀವು ತಕ್ಷಣ ಮಧ್ಯಪ್ರವೇಶಿಸಿ, ಕಡಲೆ ಬೇಳೆಗೆ ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಅನುಮೋದನೆ ನೀಡಬೇಕು ಮತ್ತು ಕರ್ನಾಟಕದಾದ್ಯಂತ ಖರೀದಿ ಕೇಂದ್ರಗಳು ಸಾಧ್ಯವಾದಷ್ಟು ಬೇಗ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು. ಇಂತಹ ಸಕಾಲಿಕ ಕ್ರಮವು ರೈತರನ್ನು ಮಾರಾಟ ಸಂಕಷ್ಟದಿಂದ ರಕ್ಷಿಸುತ್ತದೆ, ಮಾರುಕಟ್ಟೆಗಳನ್ನು ಸ್ಥಿರಗೊಳಿಸುತ್ತದೆ ಮತ್ತು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.







