ಆರೋಗ್ಯಾಧಿಕಾರಿ, ಅಬಕಾರಿ ಇಲಾಖೆಗೆ ನಿಯೋಜನೆ ಸಂಬಂಧ ಸಿಎಂ ಹೆಸರಿನಲ್ಲಿ ಪತ್ರ ವೈರಲ್: ಪೊಲೀಸರಿಗೆ ದೂರು

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಮೋಹನ್ ಅವರನ್ನು ಮೈಸೂರು ಅಬಕಾರಿ ಇಲಾಖೆ ಉಪ ಆಯುಕ್ತರನ್ನಾಗಿ ನಿಯೋಜಿಸುವ ಸಂಬಂಧದ ಸಿಎಂ ಹೆಸರಿನಲ್ಲಿ ಪತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸದರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶುಕ್ರವಾರ ಈ ಸಂಬಂಧ ಸಿಎಂ ಜಂಟಿ ಕಾರ್ಯದರ್ಶಿ ಅರುಣ್ ಪುರ್ಟಾಡೋ ದೂರು ನೀಡಿದ್ದು, ‘ಅಧಿಕೃತ ಸಂಖ್ಯೆ ಮತ್ತು ದಿನಾಂಕವಿಲ್ಲದ ಈ ಟಿಪ್ಪಣಿಯು ಸಿಎಂ ಸಚಿವಾಲಯದಲ್ಲಿ ಇ-ತಂತ್ರಾಂಶದಲ್ಲಿ ನೊಂದಾಯಿಸಿರುವುದಿಲ್ಲ. ಟಿಪ್ಪಣಿಯನ್ನು ಯಾವುದೇ ಇಲಾಖೆಗೆ ರವಾನಿಸಿರುವುದಿಲ್ಲ. ಅಲ್ಲದೆ, ಯಾವುದೇ ವರ್ಗಾವಣೆ/ನಿಯೋಜನೆ ಆದೇಶ ಹೊರಡಿಸಿರುವುದಿಲ್ಲ. ಆದಾಗ್ಯೂ ಸಿಎಂ ಹಾಗೂ ಸರಕಾರಕ್ಕೆ ಕೆಟ್ಟ ಹೆಸರನ್ನು ತರುವ ದುರುದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದು, ತಪ್ಪಿತಸ್ಥರನ್ನು ಪತ್ತೆ ಮಾಡಬೇಕೆಂದು ಕೋರಿದ್ದಾರೆ.
ಕಮಿಷನ್ ದಂಧೆಗೆ ಕನ್ನಡಿ: ಆರ್.ಅಶೋಕ್
‘ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿ, ಸ್ವತಃ ಸಿಎಂ ಅವರೇ ಆರೋಗ್ಯಾಧಿಕಾರಿಯನ್ನು ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಪತ್ರ ಬರೆದು ನಿರ್ದೇಶನ ನೀಡಿರುವುದು ಈ ಸರಕಾರದಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ, ಅಬಕಾರಿ ಇಲಾಖೆಯ ಕಮಿಷನ್ ದಂಧೆಗೆ ಕನ್ನಡಿ ಹಿಡಿದಿದೆ. ಅದರಲ್ಲೂ ಸಿಎಂ ಅವರೇ ಶಿಫಾರಸ್ಸು ಮಾಡಿದ್ದು, ವರ್ಗಾವಣೆ ಮಾಡಿರುವ ಅಧಿಕಾರಿ ಡಾ.ಮೋಹನ್ ಕೃಷಿ ಸಚಿವ ಚಲುವರಾಯಸ್ವಾಮಿ ಸಂಬಂಧಿ ಎನ್ನುವ ಮಾಹಿತಿ ಇದೆ. ಏನು ನಡೆಯುತ್ತಿದೆ ಸ್ವಾಮಿ ನಿಮ್ಮ ಸರಕಾರದಲ್ಲಿ? ಇದೇನು ಸರಕಾರವೋ? ಅಥವಾ ತುಘಲಕ್ ದರ್ಬಾರೋ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.






