ರಾಜ್ಯದ ಹಲವೆಡೆ ಶೀತಗಾಳಿ ತೀವ್ರ; ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಬೆಳಗಿನ ಜಾವ ದಟ್ಟ ಮಂಜು ಸಾಧ್ಯತೆ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಪರಿಸ್ಥಿತಿ ತೀವ್ರಗೊಂಡಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಮತ್ತು 15 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಹಲವೆಡೆ ತಾಪಮಾನ ತೀವ್ರವಾಗಿ ಕುಸಿದಿದೆ. ಇದು ಈ ಋತುವಿನ ಅತ್ಯಂತ ಶೀತದ ಸಮಯಗಳಲ್ಲಿ ಒಂದಾಗಿದೆ.ಇತ್ತ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿಯೂ ಶೀತಗಾಳಿ ಬೀಸುವ ಸಾಧ್ಯತೆ ಇದೆ. ಆದರೆ ಕರಾವಳಿ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಪ್ರಮುಖ ಬದಲಾವಣೆಯ ನಿರೀಕ್ಷೆಯಿಲ್ಲ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ವಿಶೇಷವಾಗಿ ಬೆಳಗಿನ ಜಾವದಲ್ಲಿ ದಟ್ಟವಾದ ಮಂಜು ಆವರಿಸುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಮತ್ತು 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ತೀವ್ರ ಶೀತ ವಾತಾವರಣವಿದ್ದು, ಕಳೆದ ಒಂದು ತಿಂಗಳಿನಿಂದ ಕನಿಷ್ಠ ತಾಪಮಾನ ಸ್ಥಿರವಾಗಿ ಕುಸಿಯುತ್ತಿದೆ.
ರಾಯಚೂರು ಮತ್ತು ಧಾರವಾಡದಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಗದಗ ಮತ್ತು ಹಾವೇರಿಯಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ ಹಾಸನದಲ್ಲಿ ಕನಿಷ್ಠ ತಾಪಮಾನ 8.5 ಡಿಗ್ರಿ ಸೆಲ್ಸಿಯಸ್ ಇದ್ದರೆ, ದಾವಣಗೆರೆಯಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ತಾಪಮಾನ ಸುಮಾರು 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೀದರ್ ಮತ್ತು ವಿಜಯಪುರದಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.







