ರಾಜ್ಯದಲ್ಲಿ ಜ.14ರ ವರೆಗೆ ಚಳಿಯ ವಾತಾವರಣ ಸಾಧ್ಯತೆ

ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು : ರಾಜ್ಯದಲ್ಲಿ ಜ.14ರ ವರೆಗೆ ಚಳಿಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ದಕ್ಷಿಣ ಕನ್ನಡದ ಸುಳ್ಯ, ಕಡಬ, ಪುತ್ತೂರು ತಾಲೂಕುಗಳಲ್ಲಿ ಅಲ್ಲಲ್ಲಿ ರಾತ್ರಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಲೆನಾಡು ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಇರಲಿದ್ದು, ಕೊಡಗು, ಹಾಸನ ಜಿಲ್ಲೆಗಳ ಅಲ್ಲಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಜ.14ರವರೆಗೆ ಈಗ ಇರುವ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.
ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿ, ಗದಗ, ದಾವಣಗೆರೆ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳಿಗ್ಗೆಯಿಂದ ಮೋಡದ ವಾತಾವರಣದ ಮುನ್ಸೂಚನೆ ಇದೆ. ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆ ರಾತ್ರಿ ತುಂತುರು ಮಳೆಯ ಮುನ್ಸೂಚೆನೆ ಇದೆ. ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜ.14ರಿಂದ ಚಳಿಯ ಪ್ರಮಾಣವು ಕಡಿಮೆಯಾಗುವ ಸೂಚನೆಗಳಿವೆ.
14ರ ವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ಜ.15ರಿಂದ ಒಣ ಹವೆ ಮುಂದುವರಿಯಲಿದೆ. ಚಳಿಯ ಪ್ರಮಾಣವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕನಿಷ್ಟ ಉಷ್ಣಾಂಶದಲ್ಲಿ ಇಳಿಕೆ: ರವಿವಾರದಂದು ಹಾಸನದಲ್ಲಿ ಕನಿಷ್ಟ ಉಷ್ಣಾಂಶ 9 ಡಿಗ್ರಿ ಸೆಲ್ಸಿಯಲ್ಗೆ ಇಳಿಕೆಯಾಗಿದ್ದು, ಬೀದರ್ 10, ದಾವಣಗೆರೆ 11, ಹಾವೇರಿ ಮತ್ತು ವಿಜಯಪುರ 12, ಗದಗ, ಬೆಂಗಳೂರು, ಮೈಸೂರು ಜಿಲ್ಲೆಯಲ್ಲಿ ಕನಿಷ್ಟ ಉಷ್ಣಾಂಶ 16ಕ್ಕೆ ತಲುಪಿದೆ ಎಂದು ಹವಾಮಾನ ಇಲಾಖೆ ಹೇಳಿದೆ.







