ಶೇ.50ರಷ್ಟು ವಾಣಿಜ್ಯ ಸಿಲಿಂಡರ್ ಪೂರೈಕೆಯಾದರೆ ಎಂದಿನಂತೆ ಹೋಟೆಲ್ಗಳು ಕಾರ್ಯನಿರ್ವಹಿಸಲಿವೆ : ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಸರಕಾರವು ಘೋಷಣೆ ಮಾಡಿದಂತೆ ನಾಳೆಯಿಂದ ಶೇ.50ರಷ್ಟು ವಾಣಿಜ್ಯ ಸಿಲಿಂಡರ್ಗಳು ಪೂರೈಕೆಯಾದರೆ, ಎಂದಿನಂತೆ ಹೋಟೆಲ್ಗಳು ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಹೋಟೆಲ್ಗಳಿಗೆ ಸರಬರಾಜು ಆಗುವ ವಾಣಿಜ್ಯ ಸಿಲಿಂಡರ್ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಎರಡು ವಾರಗಳಿಂದ ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಒಳಗಾಗಿದೆ ಎಂದರು.
ನಗರದಲ್ಲಿ ಕೆಲ ಹೋಟೆಲ್ಗಳನ್ನು ಮುಚ್ಚಲಾಗಿದೆ. ಇನ್ನು ಕೆಲ ಹೋಟೆಲ್ಗಳ ಮೆನುವಿನಲ್ಲಿ ಕಡಿತ ಮಾಡಲಾಗಿದೆ. ಹದಿನೈದು ದಿನಗಳಿಂದ ರಾಜ್ಯದ ಹೋಟೆಲ್ ಉದ್ಯಮವು ಸುಮಾರು 150 ಕೋಟಿ ರೂ.ಗೂ ಅಧಿಕ ನಷ್ಟವನ್ನು ಅನುಭವಿಸಿದೆ. ಈಗ ಕೇಂದ್ರ ಸರಕಾರವು ಶೇ.50ರಷ್ಟು ವಾಣಿಜ್ಯ ಸಿಲಿಂಡರ್ಗಳು ಪೂರೈಕೆ ಮಾಡಲಾಗುತ್ತದೆ ಎಂದು ಘೋಷಿಸಿದ್ದು, ಇದರಿಂದ ಹೋಟೆಲ್ ಉದ್ಯಮಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಈಗಾಗಲೇ ರಾಜ್ಯದ ಕೆಲ ಹೋಟೆಲ್ಗಳಲ್ಲಿ ವಿದ್ಯುತ್ ಒಲೆ ಹಾಗೂ ಸೌದೆ ಸೇರಿ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಂಡು ಅಡುಗೆಯನ್ನು ತಯಾರು ಮಾಡಲಾಗುತ್ತಿದೆ. ಈಗ ಶೇ.50ರಷ್ಟು ವಾಣಿಜ್ಯ ಸಿಲಿಂಡರ್ ಗಳು ಪೂರೈಕೆಯಾದರೆ, ಹೋಟಲ್ಗಳು ಎಂದಿನಂತೆ ಹೋಟೆಲ್ಗಳು ಕಾರ್ಯ ನಿರ್ವಹಿಸಲಿವೆ ಎಂದು ಅವರು ಹೇಳಿದರು.







