2024ರ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು: ಮಹಾ ಧರಣಿಯಲ್ಲಿ ನಿರ್ಣಯ

ಬೆಂಗಳೂರು: ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಯೋಜಿಸಿದ್ದ ‘72 ಗಂಟೆಗಳು ದುಡಿಯುವ ಜನರ ಮಹಾ ಧರಣಿಯು ಮಂಗಳವಾರದಂದು ಅಂತ್ಯಗೊಂಡಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸುವ ಕೆಲಸ ಈಗಿನಿಂದಲೇ ಪ್ರಾರಂಭಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಕೇಂದ್ರ ಸರಕಾರವು ತರುತ್ತಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಭೂ ತಿದ್ದುಪಡಿ ಕಾಯ್ದಗಳು ಅವರ ಕಾರ್ಪೊರೇಟ್ ಮಿತ್ರರ ದಾಹವನ್ನು ತಣಿಸುವ ಸಂಚುಗಳಾಗಿವೆ. ಹಾಗಾಗಿ ಈ ಕಾಯ್ದೆಗಳು ಜಾರಿಯಾಗದಂತೆ ಕ್ರಮ ವಹಿಸಬೇಕು ಎಂದು ಪ್ರಟಿಭಟನಾಕಾರರು ಆಗ್ರಹಿಸಿದರು.
ಕಳೆದ ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ, ದುರಾಡಳಿತ, ದ್ವೇಷ ರಾಜಕಾರಣದಿಂದ ರೋಸಿತ್ತಿದ್ದ ನಾವು, ಈ ರಾಜ್ಯದ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಜನಸಾಮಾನ್ಯರು ಎಲ್ಲರೂ ಕೂಡಿ ಅವರಿಗೆ ಪಾಠ ಕಲಿಸಿ ಅಧಿಕಾರದಿಂದ ಇಳಿಸಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಮ್ಮ ಪಾಲಿನ ಪರಿಶ್ರಮವೂ ಅಡಗಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ತನ್ನನ್ನು ಅಧಿಕಾರಕ್ಕೆ ತಂದ ಜನ ವರ್ಗಗಳ ಕೂಗನ್ನೇ ನಿರ್ಲಕ್ಷಿಸದಂತೆ ನೋಡಿಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಹಿಂದಿನ ಬಿಜೆಪಿ ಸರಕಾರ ತಂದ 4 ಪ್ರಮುಖ ಜನ ವಿರೋಧಿ ಕಾಯ್ದೆಗಳನ್ನು ಇನ್ನೂ ವಾಪಾಸ್ ಪಡೆದಿಲ್ಲ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ದೆ, ಕಾರ್ಮಿಕರ ಕೆಲಸವನ್ನು 8 ರಿಂದ 12 ಗಂಟೆಗೆ ಏರಿಸುವ ಕಾಯ್ದೆಗಳು ಈಗಲೂ ಚಾಲ್ತಿಯಲ್ಲಿವೆ. ಅದನ್ನು ರದ್ದುಗೊಳಿಸಲು ತೋರಬೇಕಾದ ಯಾವ ಉತ್ಸುಕತೆಯನ್ನೂ ರಾಜ್ಯ ಸರಕಾರ ತೋರುತ್ತಿಲ್ಲ. ಬರುವ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಸಿಎಂ ಕಳುಸಿರುವ ಪತ್ರದಲ್ಲಿ ಹೋರಾಟದ ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ಡಿ.19ರಂದು ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿ ಮಾಡಿರುವುದಾಗಿ ತಿಳಿಸಿದ್ದಾರೆ. ಸರಕಾರದ ಈ ತೀರ್ಮಾನವನ್ನು ನಾವು ಸ್ವಾಗತಿಸುತ್ತಿದ್ದು, ಆದರೆ ಈ ದಿನಾಂಕವನ್ನು ಯಾವುದೇ ಕಾರಣಕ್ಕೂ ಮತ್ತೆ ಮುಂದೂಡಬಾರದು. ನಾವು ಮುಂದಿಟ್ಟಿರುವ ಎಲ್ಲ 18 ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಚಿವರು ಮತ್ತು ಕಾರ್ಯದರ್ಶಿಗಳು ಇರುವಂತಹ ವಿಶೇಷ ಉನ್ನತ ಮಟ್ಟದ ಸಭೆಯಾಗಿ ಆಯೋಜಿಸಬೇಕು. ವಿಶೇಷ ಉನ್ನತ ಸಭೆ ನಡೆದು ಸರಿಯಾದ ಕ್ರಮಗಳಿಗೆ ಸರಕಾರ ಮುಂದಾಗದಿದ್ದಲ್ಲಿ ರಾಜ್ಯವ್ಯಾಪಿಯಾಗಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಲಾಯಿತು.







