ಕಾನೂನು ವ್ಯವಸ್ಥೆಗೆ ಧಕ್ಕೆ ಆರೋಪ: ವಿಜಯೇಂದ್ರ, ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ದೂರು

ಬಿ.ವೈ.ವಿಜಯೇಂದ್ರ / ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: RCB ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ 11 ಮೃತಪಟ್ಟ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿಪಕ್ಷ ನಾಯಕರುಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಕಾನೂನು ವ್ಯವಸ್ಥೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ನಿಯೋಗ ಡಿಜಿಪಿ ಡಾ.ಎಂ.ಎ.ಸಲೀಂ ಅವರಿಗೆ ಮಂಗಳವಾರ ದೂರು ಸಲ್ಲಿಸಿದೆ.
ಐಪಿಎಲ್ ಫೈನಲ್ನಲ್ಲಿ RCB ತಂಡ ಗೆಲುವು ಸಾಧಿಸಿದ ನಂತರ ಬೆಂಗಳೂರು ನಗರಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕೆಎಸ್ಸಿಎ, ಡಿಎನ್ಎ ಸಂಸ್ಥೆ ಹಾಗೂ RCB ತಂಡದ ಆಯೋಜಕರು ಸೂಕ್ತ ರೀತಿಯಲ್ಲಿ ಕ್ರಮವಹಿಸದೆ ನಡೆದಿರುವ ದುರ್ಘಟನೆಯ ಕುರಿತು ಈಗ ತನಿಖೆ ಪ್ರಾರಂಭವಾಗಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧ ಹಾಗೂ ಕ್ರೀಡಾ ಅಭಿಮಾನಿಗಳಿಗೆ ಆಕ್ರೋಶ ತರುವ ಹೇಳಿಕೆಗಳನ್ನು ನೀಡಿ ಕಾನೂನು ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಾಲ್ತುಳಿತ ದುರಂತ ನಡೆದ ನಂತರ ಸುಳ್ಳಿನ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿರುವ ಬಿ.ವೈ.ವಿಜಯೇಂದ್ರ, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಇದೇ ವೇಳೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಸೇರಿದಂತೆ ಹಲವರು ಇದ್ದರು.