ಮದ್ಯ ಮಾರಾಟ ಪರವಾನಗಿಗೆ ಲಂಚ ಕೇಳಿದ ಪ್ರಕರಣ: ಅಬಕಾರಿ ಸಚಿವ, ಅವರ ಪುತ್ರನ ವಿರುದ್ಧ ಲೋಕಾಯುಕ್ತಕ್ಕೆ ದೂರು

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ
ಬೆಂಗಳೂರು: ಮದ್ಯ ಮಾರಾಟದ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಅವರ ಪುತ್ರನ ಪಾತ್ರದ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಸೋಮವಾರ(ಜ.19) ಲಕ್ಷ್ಮೀನಾರಾಯಣ್ ಎಂಬವರು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಅವರ ಪುತ್ರ ಮತ್ತು ಅಬಕಾರಿ ಇಲಾಖೆಯ ಉಪ ಆಯುಕ್ತ(ಡಿಸಿ) ಜಗದೀಶ್ ನಾಯ್ಕ್ ಅವರ ಪಾತ್ರದ ಕುರಿತು ನಿಷ್ಪಕ್ಷಪಾತವಾಗಿ ಸೂಕ್ತ ತನಿಖೆ ನಡೆಸಬೇಕೆಂದು ದೂರು ಸಲ್ಲಿಕೆ ಮಾಡಿದ್ದಾರೆ.
ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮೀನಾರಾಯಣ್, ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಈಗಾಗಲೇ ಮೂವರ ಬಂಧನವಾಗಿದೆ. ಬಿಡುಗಡೆಯಾದ ಆಡಿಯೋದಲ್ಲಿ ಸಚಿವರಿಗೆ ಎಷ್ಟು ಹಣ ಕೊಡಬೇಕಿದೆ ಎಂದು ಅಬಕಾರಿ ಡಿಸಿಯವರು ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ಆದ್ದರಿಂದ ಸಚಿವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದರು.
ನಾನು ಸರಕಾರಕ್ಕೆ ಪಾವತಿಸಬೇಕಿರುವ ಎಲ್ಲ ಶುಲ್ಕವನ್ನು ಪಾವತಿಸಿದ್ದರೂ ಸಹ ಲಂಚಕ್ಕೆ ಬೇಡಿಕೆಯಿಟ್ಟು, ಪರವಾನಗಿಯನ್ನು ಕೊಟ್ಟಿರಲಿಲ್ಲ. ಟ್ರ್ಯಾಪ್ ಆಗುವ ಐದು ನಿಮಿಷಗಳಿಗೂ ಮುಂಚೆ ಡಿಸಿ ಮಾತಾಡಿರುವ ಆಡಿಯೋ ನನ್ನ ಬಳಿ ಇದೆ. ಆ ಆಡಿಯೋ ಸೇರಿದಂತೆ ಸೂಕ್ತ ದಾಖಲೆಗಳನ್ನು ಲೋಕಾಯುಕ್ತ ಎಸ್ಪಿಯವರಿಗೆ ನೀಡಿದ್ದೇನೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಬೇರೆ ಕಾನೂನು ಮಾರ್ಗಗಳ ಬಗ್ಗೆ ಪರಿಶೀಲಿಸುತ್ತೇವೆ ಎಂದು ದೂರುದಾರ ಲಕ್ಷ್ಮೀನಾರಾಯಣ್ ತಿಳಿಸಿದರು.
ಪ್ರಕರಣದ ಹಿನ್ನೆಲೆ:
ದೂರುದಾರ ಲಕ್ಷ್ಮೀನಾರಾಯಣ ತಮ್ಮ ಮಗನಿಗಾಗಿ ಮದ್ಯದಂಗಡಿ ತೆರೆಯುವ ಸಲುವಾಗಿ ಸಿಎಲ್-7 ಮತ್ತು ಮೈಕ್ರೋ ಬ್ರೈವರಿ ಪರವಾನಗಿ ಪಡೆಯಲು ಸರಕಾರಿ ಶುಲ್ಕ 21 ಲಕ್ಷ ರೂ. ಪಾವತಿಸಿದ್ದರು. ಆದರೆ, ಈ ಎರಡು ಪರವಾನಗಿಗಳನ್ನು ಕೊಡಲು ಲಕ್ಷ್ಮೀನಾರಾಯಣ ಅವರಿಗೆ ಬೆಂಗಳೂರು ನಗರ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಬರೋಬ್ಬರಿ 2.30 ಕೋಟಿ ರೂ. ಲಂಚ ಕೇಳಿದ್ದಾರೆ. ಅದರಲ್ಲಿ 50 ಲಕ್ಷ ರೂ. ಮುಂಗಡ ಕೊಡಲು ಹೇಳಿದ್ದರು ಎನ್ನಲಾದ ಆಡಿಯೋ ಸಂಭಾಷಣೆಗಳು ಬಿಡುಗಡೆಯಾಗಿದ್ದವು.
ಇದಕ್ಕೆ ಸಂಬಂಧಿಸಿದಂತೆ ಲಕ್ಷ್ಮೀನಾರಾಯಣ ನೇರವಾಗಿ ಲೋಕಾಯುಕ್ತ ಪೊಲೀಸರ ಮೊರೆಹೋದರು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಅಬಕಾರಿ ಡಿಸಿ ಜಗದೀಶ್ ನಾಯ್ಕ್, ಎಸ್ಪಿ ತಮ್ಮಣ್ಣ ಮತ್ತು ಕಾನ್ಸ್ಟೇಬಲ್ ಲಕ್ಕಪ್ಪ ಗಣಿಗೆ ಎಂಬವರನ್ನು ಜ.17ರಂದು ಬಂಧಿಸಿತ್ತು. ಇದೀಗ ಲಕ್ಷ್ಮೀನಾರಾಯಣ ಅವರು ಅಬಕಾರಿ ಸಚಿವರು ಹಾಗೂ ಅವರ ಪುತ್ರನ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ.







