ಧರ್ಮಸ್ಥಳ ಎಸ್ಐಟಿ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ ಆರೋಪ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ದೂರು

ಸಾಂದರ್ಭಿಕ ಚಿತ್ರ
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆಗಳು, ಕಾಣೆಯಾದವರು ಹಾಗೂ ಅನುಮಾನಾಸ್ಪದ ಸಾವುಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸಲು ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ "ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ"ಯ ಸದಸ್ಯ ರಘು ಜಾಣಗೆರೆ ಅವರು ದೂರು ಸಲ್ಲಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಬರೆದಿರುವ ಮನವಿ ಪತ್ರದ ಪ್ರತಿಯನ್ನು ಭಾರತದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೂ ಸಲ್ಲಿಸಲಾಗಿದೆ.
ಮನವಿಯಲ್ಲಿ, ಹೈಕೋರ್ಟ್ ಈ ವಿಷಯವನ್ನು ಸುವೋಮೊಟೋ ಪ್ರಕರಣವಾಗಿ ಪರಿಗಣಿಸಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಲಾಗಿದೆ.
2025ರ ಜುಲೈ 19ರಂದು, ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಈ ತಂಡಕ್ಕೆ ಕಳೆದ 25 ವರ್ಷಗಳಲ್ಲಿ ನಡೆದ ನಾಪತ್ತೆ, ಅನುಮಾನಾಸ್ಪದ ಸಾವುಗಳ ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿ ವಹಿಸಲಾಗಿದೆ. 2012ರ ಅಕ್ಟೋಬರ್ 9ರಂದು ನಡೆದ 17 ವರ್ಷದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇನ್ನೂ ಬಗೆಹರಿಯದ ವಿಚಾರವಾಗಿದ್ದು, ನ್ಯಾಯಕ್ಕಾಗಿ ಹಲವಾರು ಹೋರಾಟಗಾರರು ನಿರಂತರ ಹೋರಾಟ ನಡೆಸುತ್ತಿದ್ದಾರೆ. SIT ತನ್ನ ತನಿಖೆಯನ್ನು ವಿಸ್ತರಿಸುತ್ತಿರುವ ಈ ಹಂತದಲ್ಲಿ, ಸ್ವಾರ್ಥ ಹಿತಾಸಕ್ತಿಗಳ ಸಂಘಟಿತ ಒತ್ತಡಗಳು ಹೆಚ್ಚುತ್ತಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ದೂರುದಾರರು SIT ಸಂಪರ್ಕಿಸದಂತೆ ತಡೆಯುವ ಪ್ರಯತ್ನ, ಪೊಲೀಸ್ ದೂರುಗಳನ್ನು ದಾಖಲಿಸುವ ಮೂಲಕ ಹೋರಾಟಗಾರು ಮತ್ತು ಸಂತ್ರಸ್ತ ಕುಟುಂಬಗಳನ್ನು ಗುರಿಯಾಗಿಸುತ್ತಿರುವುದು, ಸಾಕ್ಷಿಗಳು ಹಾಗೂ ದೂರು ನೀಡಲು ಬರುವವರಿಗೆ ಭಯದ ವಾತಾವರಣ ಸೃಷ್ಟಿಸುವ ಯತ್ನಗಳು ನಡೆಯುತ್ತಿವೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂ.ಡಿ., ಜಯಂತ್ ಸೇರಿದಂತೆ ಪ್ರಮುಖ ಹೋರಾಟಗಾರರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಮಾನಸಿಕ ಆಘಾತದಿಂದ ಬಳಲುತ್ತಿರುವ ಸುಜಾತಾ ಭಟ್ ಅವರನ್ನೂ ಇದೇ ರೀತಿಯ ದೂರುಗಳ ಮೂಲಕ ಗುರಿಯಾಗಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದು ಸ್ವಾರ್ಥ ಹಿತಾಸಕ್ತಿಗಳು ಹಾಗೂ ಕೆಲವು ಪೊಲೀಸ್ ಅಧಿಕಾರಿಗಳ ಅನುಮಾನಾಸ್ಪದ ಸಮನ್ವಯದ ಫಲಿತಾಂಶವಾಗಿದ್ದು, SIT ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸಲು ನಡೆದಿರುವ ಸಂಘಟಿತ ಪ್ರಯತ್ನವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಆದುದರಿಂದ 'ಧರ್ಮಸ್ಥಳ ದೂರ'ನ್ನು ಸುವೋಮೊಟೋ ಪ್ರಕರಣವಾಗಿ ಪರಿಗಣಿಸಲು ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ. ಆ ಮೂಲಕ ಹೋರಾಟಗಾರರು ಹಾಗೂ ಸಂತ್ರಸ್ತರ ವಿರುದ್ಧ ನಡೆಯುತ್ತಿರುವ ಸಂಘಟಿತ ದೂರುಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು. ತನಿಖೆಯನ್ನು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಮನವಿಯಲ್ಲಿ ರಘು ಜಾಣಗೆರೆಯವರು ಆಗ್ರಹಿಸಿದ್ದಾರೆ.
ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಹೋರಾಟಗಾರರು ಹಾಗೂ ಸಾಕ್ಷಿಗಳಿಗೆ ಕಿರುಕುಳ ನೀಡುವುದನ್ನು ತಡೆಯಲು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.







