ವಸತಿ ಯೋಜನೆಯಲ್ಲಿ ಮನೆ ಹಂಚಿಕೆಗೆ ಲಂಚ ಪಡೆದ ಆರೋಪ: ಶಾಸಕ ಬಿ.ಆರ್. ಪಾಟೀಲ್ ಆಡಿಯೋ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು

ಬಿ.ಆರ್.ಪಾಟೀಲ್/ಸರ್ಫರಾಝ್ ಖಾನ್
ಬೆಂಗಳೂರು: ‘ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗಿದೆ’ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪದ ಆಡಿಯೋಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನೈಜ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎಚ್.ಎಂ.ವೆಂಕಟೇಶ್ ಮಂಗಳವಾರ ದೂರು ನೀಡಿದ್ದಾರೆ.
ಲಂಚ ಕೊಟ್ಟರೇ ನಿವೇಶನ ಕೊಡುವ ವಿಚಾರವಾಗಿ ಶಾಸಕ ಬಿ.ಆರ್.ಪಾಟೀಲ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ನಡುವೆ ಮಾತುಕತೆ ನಡೆದಿದ್ದು, ಇದರ ಆಡಿಯೋ ಬಹಿರಂಗಗೊಂಡಿದೆ. ಜನರ ತೆರಿಗೆ ಹಣವನ್ನು ಇವರು ಬಳಸಿಕೊಂಡು ವಂಚನೆ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಇಷ್ಟರಲ್ಲಿ ಸುವೋಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳು ಹಂಚಬೇಕಿತ್ತು. ದುರ್ಬಲರಿಗೆ ಹಂಚಿಕೆಯಾಗಬೇಕಿದ್ದ ಮನೆಗಳಿಗೆ ಹಣ ಪಡೆಯುತ್ತಿದ್ದಾರೆ. ಮನೆಗಳ ಹಂಚಿಕೆಗೆ ಪ್ರತಿ ಮನೆಗೆ 10 ಸಾವಿರ ಹಣ ಪಡೆಯಲಾಗಿದೆ. ಬಿ.ಆರ್.ಪಾಟೀಲ್ ಮತ್ತು ಸರ್ಫರಾಜ್ ಮಾತನಾಡಿರುವುದರಲ್ಲಿ ಸತ್ಯಾಂಶ ಇರಬಹುದು. ಹೀಗಾಗಿ ಆಡಿಯೋ ಇಟ್ಟುಕೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ಎಚ್.ಎಂ.ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.