ಆಧಾರ ರಹಿತ ಆರೋಪ : ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ದೂರು

ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಕೋಟ್ಯಾಂತರ ರೂ. ಹಣದ ವ್ಯವಹಾರ ನಡೆಯುತ್ತಿದೆ ಹಾಗೂ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದು, ಆದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್ ದೂರು ನೀಡಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರಕಾರದ ಬಗ್ಗೆ ಪಕ್ಷದ ಶಾಸಕರ ಹೆಸರನ್ನು ಪ್ರಸ್ತಾಪಿಸಿ ಹಾಗೂ ವರಿಷ್ಠರ ಮೇಲೆ ಆಧಾರ ರಹಿತವಾದ ಸುಳ್ಳು ಹೇಳಿಕೆಯನ್ನು ನೀಡಿ ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ಸುಳ್ಳು ಆರೋಪವನ್ನು ಮಾಡಿದ್ದಾರೆ. ಹಾಗೂ ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಅವರೇ ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಅವರ ಬಳಿ ಇರುವ ಮಾಹಿತಿ ಹಾಗೂ ಸಂದೇಶಗಳನ್ನು ಪರಿಶೀಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಅವರು ನೀಡಿರುವ ಅಂಕಿ ಅಂಶವನ್ನು ಅವರಿಂದ ಮಾಹಿತಿ ಪಡೆಯಲು ಕೂಡಲೇ ಅವರನ್ನು ಬಂಧಿಸಬೇಕು. ಅವರೇ ನನ್ನ ಬಳಿ ದಾಖಲೆ ಇದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ದಾಖಲೆಯನ್ನು ಮರೆಮಾಚುವುದು ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲಿಸಿದಂತೆ ಅದರಲ್ಲೂ ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿ ಇರುವುದರಿಂದ ಇವರು ಅಧಾರ ರಹಿತವಾದಂತ ಆರೋಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರಿಗೆ ಯಾರು ಮಾಹಿತಿ ನೀಡಿದ್ದಾರೆ. ಯಾವ ವ್ಯಕ್ತಿಯಿಂದ ಸಂದೇಶ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ತಕ್ಷಣ ಇವರನ್ನು ಬಂಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.







