ಜನಪರ ಯೋಜನೆಗಳ ಮೂಲಕ ಬಡವರ ಜೇಬಿಗೆ ಹಣ ಹಾಕುತ್ತಿರುವ ಕಾಂಗ್ರೆಸ್ ಸರಕಾರ: ಡಿ.ಕೆ. ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಸರಕಾರವು ವಿವಿಧ ಜನಪರ ಯೋಜನೆಗಳ ಮೂಲಕ ಬಡವರ ಜೇಬಿಗೆ 1 ಲಕ್ಷ ಕೋಟಿ ರೂ.ಗಳನ್ನು ಹಾಕುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಮ್ಮ ಸರಕಾರ ರಾಜ್ಯದ ಎರಡು ವರ್ಷಗಳಿಂದ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ರೈತರ ಉಚಿತ ವಿದ್ಯುತ್‍ಗೆ 20 ಸಾವಿರ ಕೋಟಿ, ವಿವಿಧ ಪಿಂಚಣಿ ಯೋಜನೆಗೆ 10 ಸಾವಿರ ಕೋಟಿ, ಪಂಚ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ, ಸಮಾಜ ಕಲ್ಯಾಣ ಯೋಜನೆಗಳಿಗೆ ಸೇರಿ 1 ಲಕ್ಷ ಕೋಟಿ ರೂ.ನಷ್ಟು ಹಣವನ್ನು ನಮ್ಮ ಸರಕಾರ ಬಡವರ ಜೇಬಿಗೆ ಹಾಕುತ್ತಿದೆ ಎಂದು ಅವರು ವಿವರಿಸಿದರು.
ಒಂದು ಲಕ್ಷ ಕೋಟಿ ಹಣದಲ್ಲಿ ಬಿಜೆಪಿ ಅಥವಾ ಜೆಡಿಎಸ್‍ನವರ ಒಂದು ಕಾರ್ಯಕ್ರಮ ಇದೆಯೇ? ನಾನು ಶಾಸಕನಾಗಿದ್ದಾಗ ಜೆ.ಎಚ್ ಪಟೇಲರ ಕಾಲದಲ್ಲಿ ಪಂಚಾಯ್ತಿಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಕೃಷ್ಣ ಅವರ ಕಾಲದಲ್ಲಿ ಅದನ್ನು 5 ಲಕ್ಷಕ್ಕೆ ಏರಿಕೆ ಮಾಡಿದೆವು. 27 ಇಲಾಖೆಯನ್ನು ಪಂಚಾಯ್ತಿಗೆ ಸೇರಿಸಿದೆವು. ಪಂಚಾಯ್ತಿಗೆ ಈ ರೀತಿ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ ಎಂದು ಅವರು ತಿಳಿಸಿದರು.
ಜೆಡಿಎಸ್ ವಿಚಾರಕ್ಕೆ ಬಂದರೆ, ದೊಡ್ಡ ಗೌಡರು, ಅವರ ಮಕ್ಕಳು, ಮೊಮ್ಮಕ್ಕಳು ಯಾವ ತ್ಯಾಗ ಮಾಡಿದ್ದಾರೆ? ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಏನು? ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಹೊಟ್ಟೆ ತುಂಬಿಸಿದ್ದಾರಾ? ಜಮೀನು ಕೊಟ್ಟಿದ್ದಾರಾ ಎಂದು ಅವರು ಪ್ರಶ್ನಿಸಿದರು.
ಈಗ ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿರುವ ಅನೇಕ ನಾಯಕರು ರಾಜೀವ್ ಗಾಂಧಿ ಅವರ ಕಾಲದಲ್ಲಿ ಬೆಳೆದು ಬಂದವರು. ಈ ದೇಶದ ಸಮಗ್ರತೆ, ಐಕ್ಯತೆ ಶಾಂತಿಗಾಗಿ ನಮ್ಮ ಪಕ್ಷದ ನಾಯಕರು ಮಾಡಿರುವ ತ್ಯಾಗ ಬಲಿದಾನ ಬೇರೆ ಪಕ್ಷದ ನಾಯಕರು ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಚುನಾವಣೆ ನಡೆಸಲು ಪತ್ರ ಬರೆದಿದ್ದು, ಇದನ್ನು ಯಾವ ರೀತಿ ನಡೆಸಬೇಕು ಎಂದು ತೀರ್ಮಾನ ಮಾಡಲು ಸಮಿತಿ ರಚಿಸಲಿದ್ದೇನೆ ಎಂದು ಅವರು ತಿಳಿಸಿದರು.
‘ಶುಕ್ರವಾರದಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪರಾಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಶಾಸಕರನ್ನು ಕರೆದು ನಾನು ಹಾಗೂ ಮುಖ್ಯಮಂತ್ರಿ ಸೇರಿ ಸಭೆ ಮಾಡಲಿದ್ದೇವೆ. ಬ್ಲಾಕ್ ಅಧ್ಯಕ್ಷರನ್ನು ಸಭೆಗೆ ಕರೆಯುವ ಬಗ್ಗೆ ತೀರ್ಮಾನ ಮಾಡುತ್ತೇವೆ’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ







