ರಾಜ್ಯವನ್ನು ದಿವಾಳಿಯತ್ತ ತಳ್ಳಿದ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ

ಹುಬ್ಬಳ್ಳಿ: ಕಾಂಗ್ರೆಸ್ ಸರಕಾರವು ಕಳೆದ ಎರಡೂವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ಯಾವುದೇ ಅಭಿವೃದ್ಧಿಯನ್ನು ರಾಜ್ಯದಲ್ಲಿ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತಿ ಹೆಚ್ಚು ಅನುಭವಿ ಮುಖ್ಯಮಂತ್ರಿ ಇದ್ದರೂ ರಾಜ್ಯದ ಅಭಿವೃದ್ಧಿಗೆ ಬಿಡಿಗಾಸು ನೀಡಿಲ್ಲ; ಇದುವರೆಗೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಎಂದು ಆಕ್ಷೇಪಿಸಿದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಮಯದಲ್ಲಿ ಪರಿಹಾರ ಇರಲಿ; ಕನಿಷ್ಠ ಪಕ್ಷ ಸಚಿವರು ಆ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ರಾಜ್ಯವು ಆರ್ಥಿಕ ದಿವಾಳಿಯತ್ತ ರಾಜ್ಯ ಸಾಗುತ್ತಿದೆ. ಗ್ಯಾರಂಟಿ ಯೋಜನೆಗೆ ಹಣ ನೀಡಲು ಆಗುತ್ತಿಲ್ಲ. ಒಂದು ಕಡೆ ಬೆಲೆ ಏರಿಕೆ ಮಾಡಿ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ದಿನಸಿ ಅಂಗಡಿಯಲ್ಲಿ ಸಹ ಹೆಂಡ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಒತ್ತಡ ಕಾರಣ. ಸಿದ್ದರಾಮಯ್ಯರ ಸರ್ಕಾರ ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಮುಂದಾಗಿದೆ. ಇದು ರಾಜ್ಯದ ದುರ್ದೈವ ಎಂದು ಆರೋಪಿಸಿದರು.
ಇಲ್ಲಿ ಕಪಟನಾಟಕ ಮಾಡಿ ಮನೆ ಹಸ್ತಾಂತರ ಕಾರ್ಯಕ್ರಮ ಮಾಡಿದ್ದಾರೆ. ಆದರೆ ಇದು ಯಡಿಯೂರಪ್ಪ ಕಾಲದಲ್ಲಿ ಆಗಿದ್ದುದು ಎಂದು ಗಮನ ಸೆಳೆದರು. ಬಿಜೆಪಿ ಮಹಾನಗರ ಪಾಲಿಕೆ ಅಧಿಕಾರದಲ್ಲಿದ್ದಾಗ 16 ಎಕರೆ ಜಾಗವನ್ನು ಸ್ಲಂ ಬೋರ್ಡ್ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರವೂ ಆರ್ಥಿಕ ಸಹಾಯ ಮಾಡಿದೆ. ಸಿಎಂ ತಾವೇನೋ ಕಡಿದು ಕಟ್ಟೆ ಹಾಕಿ ದೊಡ್ಡದು ಭಾಷಣ ಮಾಡಿದ್ದಾರೆ ಎಂದು ಟೀಕಿಸಿದರು.
ಜಮೀರ್ ಅವರು ಅಬಕಾರಿ ಇಲಾಖೆ ಜೊತೆಗೆ ಮಾತನಾಡಿ ಕಾರ್ಯಕ್ರಮ ಹೆಸರಿನಲ್ಲಿ ಲಿಕ್ಕರ್ ಮಾರಾಟ ಮಾಡಲು ಉತ್ತೇಜಿಸಿದ್ದಾರೆ. ಇದು ಲಜ್ಜೆಗೆಟ್ಟ ಸರ್ಕಾರ. ಇವರು ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಹೊರಟಿದ್ದಾರೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿಎಂ, ಹಿಂದ ಸಮಾಜ ಮರೆತು ಬರೀ ಅಲ್ಪಸಂಖ್ಯಾತರ ಓಲೈಕೆ ಮಾಡಲು ಮುಂದಾಗಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣದ ನೀತಿ ಕಾಂಗ್ರೆಸ್ಸಿನದು ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಅಬಕಾರಿ ಇಲಾಖೆಯಲ್ಲಿ ಕಾಳದಂಧೆ ನಡೆಯುತ್ತಿದೆ. ಕಳ್ಳದಂಧೆ, ಮಟ್ಕಾ, ಲಂಚದ ಹಣದ ಮೇಲೆ ರಾಜ್ಯ ಸರ್ಕಾರ ಬದುಕುತ್ತಿದೆ ಎಂದು ತಿಳಿಸಿದರು. ತರಕೇರಿಯಲ್ಲಿ ಭಾಷಣಕ್ಕೂ ಮುನ್ನವೇ ಪೊಲೀಸ್ ನೋಟಿಸ್ ನೀಡಲಾಗಿದೆ ಎಂದ ಅವರು, ನಾವು ಯಾವ ರಾಜ್ಯದಲ್ಲಿ ಇದ್ದೇವೆ? ನಾವೇನು ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಇದ್ದೇವಾ? ಎಂದು ಕೇಳಿದರು. ದ್ವೇಷ ಭಾಷಣ ಕಾಯ್ದೆ ಮೂಲಕ ರಾಜ್ಯ ಸರ್ಕಾರ ಗೂಂಡಾಗಿರಿ ನಡೆಸುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಗಾಂಧಿ ಕುಟುಂಬ ಯಾವ ರೀತಿಯಲ್ಲಿ ಈ ಹಿಂದೆ ಯಾವ ರೀತಿಯಲ್ಲಿ ರಾಜ್ಯಪಾಲರನ್ನು ನಡೆಸಿಕೊಂಡಿತ್ತು ಎಂಬುದನ್ನು ನಾವು ನೋಡಿದ್ದೆವೆ; ದೇಶದ ಗೌರವಾನ್ವಿತ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡಿದ್ದು ನಕಲಿ ಗಾಂಧಿ ಕುಟುಂಬ ಎಂದು ಅವರು ಟೀಕಿಸಿದರು.







