ವಿಶೇಷ ಅಧಿವೇಶನ | ಕಾಂಗ್ರೆಸ್ ಸರಕಾರ ಭಿಕ್ಷುಕರಿಗೆ ನೀಡುವಂತೆ ಪರಿಹಾರ ಪ್ರಕಟಿಸಿದೆ: ಆರ್. ಅಶೋಕ್ ಟೀಕೆ

ಆರ್. ಅಶೋಕ್
ಬೆಂಗಳೂರು: ವಿಧಾನ ಮಂಡಲ ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿರುವ ಕಾಂಗ್ರೆಸ್ ಸರಕಾರ ಭಿಕ್ಷುಕರಿಗೆ ನೀಡುವಂತೆ ಪರಿಹಾರ ಪ್ರಕಟಿಸಿದ್ದು, ಅನ್ನದಾತ ರೈತರಿಗೆ ಅಪಮಾನ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಸರಕಾರ ರೈತರಿಗೆ ಪರಿಹಾರ ನೀಡಲಿದೆ ಅಥವಾ ಸಾಲಮನ್ನಾ ಮಾಡಲಿದೆ ಎಂದುಕೊಂಡಿದ್ದೆವು. ಆದರೆ 2,500 ರೂ.ಪರಿಹಾರ ನೀಡುವ ಮೂಲಕ ಭ್ರಮನಿರಸನವಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿ ನೋಡಿದರೆ ಎಕರೆಗೆ 8 ಸಾವಿರ ರೂ.ಪರಿಹಾರ ನೀಡಬೇಕಾಗುತ್ತದೆ ಎಂದರು.
ಆರ್ಥಿಕ ಇಲಾಖೆಯು ಸಾಲ ಮಾಡಲು ಸಾಮರ್ಥ್ಯ ಇಲ್ಲವೆಂದೇ ಹೇಳಿದ್ದರೂ ಹೊಸ ಘೋಷಣೆಗಳನ್ನು ಮಾಡಲಾಗುತ್ತಿದೆ. ಬರಗಾಲದ ಸಮಯದಲ್ಲಿ ತಾಯಿಯ ಹೃದಯ ಇಟ್ಟುಕೊಂಡು ಕೆಲಸ ಮಾಡುವುದು ಬಿಟ್ಟು ಕಟುಕರ ಹೃದಯ ತೋರಿಸಲಾಗಿದೆ. ಈ ರೀತಿ ಪರಿಹಾರ ಪಡೆಯಲು ರೈತರು ಭಿಕ್ಷುಕರಲ್ಲ ಎಂದು ಅವರು ಆಕ್ಷೇಪಿಸಿದರು.
ಬರ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಸರಕಾರ ಪಾಪರ್ ಆಗಿದೆ ಎಂದು ಹೇಳಬೇಕು. ಅದನ್ನು ಬಿಟ್ಟು ಕೇಂದ್ರ ಸರಕಾರ ಅರ್ಧ ಪರಿಹಾರ ನೀಡಲಿ ಎಂದು ಹೇಳಲಾಗಿದೆ. ಈ ಅಧಿವೇಶನದ ಒಟ್ಟು ಪರಿಣಾಮವೇ ರೈತರ ಕೈಗೆ ಖಾಲಿ ಚೊಂಬು ನೀಡಿರುವುದು. ಇದನ್ನು ನಾವು ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತೇವೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಭಯೋತ್ಪಾದಕರ ತಂಡ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಹಾಗೂ ಸಿ.ಟಿ.ರವಿ ಅವರನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಅದರಲ್ಲಿ ಒಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂತಹವರ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ಈ ನಾಯಕರಿಗೆ ಸರಕಾರದಿಂದ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.






