ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡ್ ಅಭಯ; ಸಿದ್ದರಾಮಯ್ಯಗೆ ರಾಷ್ಟ್ರೀಯ ಹೊಣೆಗಾರಿಕೆ : NDTV ವರದಿ

Photo: fb.com/IndiaToday
ಹೊಸದಿಲ್ಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತವಾಗಿದ್ದು, ಸಿಎಂ ಗಾದಿಗೆ ನಿರಂತರ ಪ್ರಯತ್ನದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದ ಹೈಕಮಾಂಡ್ ಅವಿರೋಧವಾಗಿ ಬೆಂಬಲಿಸಿದೆ ಎಂದು NDTV ವರದಿ ತಿಳಿಸಿದೆ. ಇದರಿಂದ ನಾಯಕತ್ವ ಬದಲಾವಣೆ ವಿಚಾರದಲ್ಲಿ ಇದ್ದ ಸುಧೀರ್ಘ ಮುಸುಕಿನ ಗುದ್ದಾಟ ಕೊನೆಗೊಳ್ಳುವ ಸೂಚನೆ ಕಾಣಿಸುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಲು ಪಕ್ಷದ ಮುಖಂಡರು ಚಿಂತನೆ ನಡೆಸಿದ್ದು, ರಾಷ್ಟ್ರಮಟ್ಟದಲ್ಲಿ ದೆಹಲಿಯಿಂದ ದೊಡ್ಡ ಪಾತ್ರವನ್ನು ನಿಭಾಯಿಸುವಂತೆ ಮನವೊಲಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಸಿದ್ದರಾಮಯ್ಯ ತಮ್ಮ ನಿರ್ಧಾರ ತಿಳಿಸಲು ಸಮಯಾವಕಾಶ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ತಮ್ಮ ನಿಷ್ಠರ ಜತೆಗೆ ಈ ವಿಷಯವನ್ನು ಚರ್ಚಿಸಿದ್ದು, ಹೈಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಘೋಷಿಸಿದ್ದಾರೆ. ಬುಧವಾರ ಅವರು ಪದತ್ಯಾಗ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಉಭಯ ನಾಯಕರ ಜತೆಗೆ ಆರು ಗಂಟೆಗೂ ಹೆಚ್ಚು ಕಾಲ ಸುಧೀರ್ಘ ಮಾತುಕತೆ ನಡೆಸಿದ ಪಕ್ಷದ ವರಿಷ್ಠರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೂರು ಸ್ಥಾನಗಳನ್ನು ಹೊಂದಲಿದ್ದು, ಈ ಬಗ್ಗೆ ಯಾವುದೇ ವದಂತಿಗಳನ್ನು ಹರಡದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
"ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಬಗ್ಗೆ ಚರ್ಚೆ ನಡೆದಿದೆ. ಇತರ ಯಾವುದೇ ವದಂತಿಗಳಲ್ಲಿ ಸತ್ಯಾಂಶ ಇಲ್ಲ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಒಂದು ನಿಮಿಷದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಶಾಸಕರನ್ನು ಉಪಾಹಾರ ಕೂಟಕ್ಕೆ ಆಹ್ವಾನಿಸಿದ್ದು, ಈ ಸಭೆಯಲ್ಲಿ ರಾಜೀನಾಮೆ ಪ್ರಕಟಿಸುತ್ತಾರೆ ಎಂಬ ವದಂತಿಗಳು ದಟ್ಟವಾಗಿ ಹಬ್ಬಿವೆ.
ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಬುಧವಾರ ಮಧ್ಯಾಹ್ನ ಬೆಂಗಳೂರು ತಲುಪಲಿದ್ದಾರೆ. ಯೋಜನೆಯಂತೆ ಅಧಿಕಾರ ಹಸ್ತಾಂತರ ಸುಗಮವಾಗಿ ಸಾಗಿದರೆ, ಒಂದು ವಾರದ ಒಳಗಾಗಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.






