ಜಾತಿ ಗಣತಿ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ಕಿತ್ತು ಬಿಸಾಕಿದೆ: ಸುನಿಲ್ ಕುಮಾರ್

ಬೆಂಗಳೂರು: ರಾಜ್ಯ ಸರಕಾರ ತಯಾರಿಸಿದ ಜಾತಿ ಗಣತಿ ವರದಿಯನ್ನು ಖುದ್ದು ಕಾಂಗ್ರೆಸ್ ಹೈಕಮಾಂಡ್ ಕಿತ್ತು ಬಿಸಾಕಿದೆ. 150 ಕೋಟಿ ರೂ.ವೆಚ್ಚ ಮಾಡಿ ತಯಾರಿಸಿದ ಈ ವರದಿ ರಾಜ್ಯದ ತೆರಿಗೆದಾರರಿಗೆ ಮಾಡಿದ ಮಹಾಮೋಸದ ಜತೆಗೆ ಹಿಂದುಳಿದ ಹಾಗೂ ಶೋಷಿತ ಸಮುದಾಯಕ್ಕೆ ಮಾಡಿದ ಮಹಾಮೋಸವಾಗಿತ್ತು ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತಿ ಗಣತಿ ವರದಿಯ ದತ್ತಾಂಶದಲ್ಲಿ ಲೋಪವಿದೆ, ಇದನ್ನು ಪುನರ್ ಪರಿಶೀಲಿಸಬೇಕು ಎಂದು ಬಿಜೆಪಿ ಪದೇ ಪದೇ ಆಗ್ರಹಿಸಿತ್ತು. ಆದರೆ ಸಿದ್ದರಾಮಯ್ಯನವರು ಇಂಥ ಸೂಕ್ಷ್ಮ ವಿಚಾರದಲ್ಲೂ ತಮ್ಮ ಎಂದಿನ ಉಡಾಫೆಯನ್ನು ಮುಂದುವರಿಸಿದ್ದರು ಎಂದು ಟೀಕಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ್ದರು. ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸುವುದಕ್ಕೂ ಮುಂದಾಗಿದ್ದರು. ಆದರೆ ಈ ವರದಿಯ ದತ್ತಾಂಶ ಸರಿಯಿಲ್ಲ, ಕಾಲಮಿತಿಯಲ್ಲಿ ಮರು ಗಣತಿ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಕಿವಿ ಹಿಂಡಿ ವರದಿಯನ್ನು ಕಸದ ಬುಟ್ಟಿಗೆ ಬಿಸಾಕಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯನವರಷ್ಟೇ ಅಲ್ಲ, ಕಾಂಗ್ರೆಸ್ ಹೈಕಮಾಂಡ್ ಕೂಡ ರಾಜ್ಯದ ಹಿಂದುಳಿದ ವರ್ಗ, ಶೋಷಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಿದ್ದರಾಮಯ್ಯ ಇದೇ ವಿಚಾರವನ್ನು ಇಟ್ಟುಕೊಂಡು ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಜತೆಗೆ ಸಮುದಾಯಗಳ ಮಧ್ಯೆ ಅಸಮಾಧಾನ, ಬೇಸರವನ್ನು ಸೃಷ್ಟಿಸಿದ್ದರು. ಈ ಎಲ್ಲ ಅವಾಂತರಗಳ ಕಾರಣಕ್ಕಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ತಿಳಿಸಿದ್ದಾರೆ.