MLC ನಸೀರ್ ಅಹ್ಮದ್ ದಿವಾಳಿ ಎಂದು ಘೋಷಿಸಿದ NCLT; ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆ

ನಸೀರ್ ಅಹ್ಮದ್ | Photo Credit ; thehindu.com
ಬೆಂಗಳೂರು: ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ (MLC) ನಸೀರ್ ಅಹ್ಮದ್, ಅವರ ಪತ್ನಿ ನುಝತ್ ಆಯಿಷಾ ನಸೀರ್ ಹಾಗೂ ಪುತ್ರ ಅವೈಝ್ ಅಹ್ಮದ್ ಅವರನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (NCLT)ಯ ಬೆಂಗಳೂರು ಪೀಠವು ದಿವಾಳಿಗಳೆಂದು ಘೋಷಿಸಿದೆ. ಈ ಬೆಳವಣಿಗೆಯಿಂದ ಅವರು ವಿಧಾನ ಪರಿಷತ್ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆ ಎದುರಾಗಿದೆ.
ನಸೀರ್ ಅಹ್ಮದ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ Ms ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪೆನಿಯ ಸಾಲಗಳಿಗೆ ಮೂವರೂ ವೈಯಕ್ತಿಕ ಖಾತರಿದಾರ(ಪರ್ಸನಲ್ ಗ್ಯಾರಂಟಿ)ರಾಗಿದ್ದ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ NCLT ಪೀಠವು ಜೂನ್ 8ರಂದು ಆದೇಶ ನೀಡಿದೆ. ಸುನಿಲ್ ಕುಮಾರ್ ಅಗರ್ವಾಲ್ (ನ್ಯಾಯಾಂಗ ಸದಸ್ಯ) ಮತ್ತು ರಾಧಾಕೃಷ್ಣ ಶ್ರೀಪಾದ (ತಾಂತ್ರಿಕ ಸದಸ್ಯ) ಅವರಿದ್ದ ಪೀಠವು ಈ ತೀರ್ಪು ನೀಡಿದೆ.
IBCಯ ಸೆಕ್ಷನ್ 125ರ ಅಡಿಯಲ್ಲಿ NCLT ದಿವಾಳಿತನ ವೃತ್ತಿಪರ (ಇನ್ಸಾಲ್ವೆನ್ಸಿ ಪ್ರೊಫೆಷನಲ್) ರವೀಂದ್ರ ಬೆಲೆಯೂರ್ ಅವರನ್ನು ದಿವಾಳಿತನ ಟ್ರಸ್ಟಿಯಾಗಿ ನೇಮಿಸಿದೆ. ಇದರೊಂದಿಗೆ ನಸೀರ್ ಅಹ್ಮದ್, ಅವರ ಪತ್ನಿ ಮತ್ತು ಪುತ್ರರ ಆಸ್ತಿಗಳ ಮೇಲಿನ ನಿಯಂತ್ರಣ ಟ್ರಸ್ಟಿಗೆ ವರ್ಗಾವಣೆಯಾಗಿದ್ದು, ಸಾಲದಾತರಿಂದ ಬಾಕಿ ಹಣ ವಸೂಲಿ ಪ್ರಕ್ರಿಯೆ ಮುಂದುವರಿಯಲಿದೆ.
ಐಬಿಸಿಯ ಸೆಕ್ಷನ್ 140 ಹಾಗೂ ಸಂವಿಧಾನದ ವಿಧಿ 191(1)(ಸಿ) ಪ್ರಕಾರ, ದಿವಾಳಿ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರಾಗಿರಲು ಅನರ್ಹರಾಗಬಹುದು. ಹೀಗಾಗಿ ನಸೀರ್ ಅಹ್ಮದ್ ಅವರ MLC ಸದಸ್ಯತ್ವದ ಮೇಲೆ ಅನಿಶ್ಚಿತತೆ ಮೂಡಿದೆ.
ದಿವಾಳಿ ಘೋಷಣೆಯ ಬಳಿಕ ಅವರು ಸಾರ್ವಜನಿಕ ಹುದ್ದೆಗಳನ್ನು ನಿರ್ವಹಿಸುವುದು, ಯಾವುದೇ ಕಂಪೆನಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುವುದು ಅಥವಾ ಕಂಪೆನಿಯ ನಿರ್ವಹಣೆಯಲ್ಲಿ ಭಾಗವಹಿಸುವುದರ ಮೇಲೂ ನಿರ್ಬಂಧಗಳು ಜಾರಿಯಾಗುತ್ತವೆ. ದಿವಾಳಿತನ ಟ್ರಸ್ಟಿಯ ಅನುಮತಿಯಿಲ್ಲದೆ ಹೊಸ ಸಾಲ ಪಡೆಯಲು ಅಥವಾ ಕೆಲವು ಹಣಕಾಸು ವ್ಯವಹಾರಗಳನ್ನು ನಡೆಸಲು ಅವಕಾಶ ಇರುವುದಿಲ್ಲ.
►ಸಾಲ ಪ್ರಕರಣವೇನು?
ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ಗೆ ವಿವಿಧ ಬ್ಯಾಂಕುಗಳು ಸಾಲ ಸೌಲಭ್ಯಗಳನ್ನು ಒದಗಿಸಿದ್ದವು. ಈ ಸಾಲಗಳಿಗೆ ನಸೀರ್ ಅಹ್ಮದ್, ಅವರ ಪತ್ನಿ ನುಝತ್ ಆಯಿಷಾ ನಸೀರ್ ಹಾಗೂ ಪುತ್ರ ಅವೈಜ್ ಅಹ್ಮದ್ ವೈಯಕ್ತಿಕ ಖಾತರಿದಾರರಾಗಿದ್ದರು. 2018ರಲ್ಲಿ ಕಂಪನಿಯ ಸಾಲ ಖಾತೆಯನ್ನು ಅನುತ್ಪಾದಕ ಆಸ್ತಿ (NPA) ಎಂದು ವರ್ಗೀಕರಿಸಿದ ಬಳಿಕ ಬ್ಯಾಂಕುಗಳು ವಸೂಲಾತಿ ಪ್ರಕ್ರಿಯೆ ಆರಂಭಿಸಿದ್ದವು.
ಸಾಲಗಳಿಗೆ ವೈಯಕ್ತಿಕ ಖಾತರಿದಾರರಾಗಿದ್ದ ನಸೀರ್ ಅಹ್ಮದ್, ಅವರ ಪತ್ನಿ ಮತ್ತು ಪುತ್ರರ ವಿರುದ್ಧ ದಿವಾಳಿತನ ಪ್ರಕ್ರಿಯೆಯನ್ನು NCLT 2022ರ ಜೂನ್ ನಲ್ಲಿ ಆರಂಭಿಸಿತ್ತು. ಬಾಕಿ ಮೊತ್ತವನ್ನು ಹೇಗೆ ಮರುಪಾವತಿಸಲಾಗುವುದು ಎಂಬ ಬಗ್ಗೆ ಯೋಜನೆ ಸಲ್ಲಿಸಲು ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ಯಾವುದೇ ಯೋಜನೆ ಸಲ್ಲಿಸದ ಹಿನ್ನೆಲೆಯಲ್ಲಿ ಬ್ಯಾಂಕುಗಳ ಒಕ್ಕೂಟವು ದಿವಾಳಿತನ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ಧರಿಸಿತು.
ತಾವು ಬ್ಯಾಂಕುಗಳಿಗೆ ನೇರವಾಗಿ ವೈಯಕ್ತಿಕ ಖಾತರಿ ನೀಡಿಲ್ಲ. ಆದ್ದರಿಂದ ತಮ್ಮ ವಿರುದ್ಧ ದಿವಾಳಿತನ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ನಸೀರ್ ಅಹ್ಮದ್, ಅವರ ಪತ್ನಿ ಹಾಗೂ ಪುತ್ರ ವಾದಿಸಿದ್ದರು. ಆದರೆ, ಬ್ಯಾಂಕುಗಳು ಮತ್ತು ಖಾತರಿದಾರರ ನಡುವಿನ ಕಾನೂನುಬದ್ಧ ಸಂಬಂಧ ಈಗಾಗಲೇ ಸ್ಥಾಪಿತವಾಗಿದೆ ಎಂದು NCLT ಈ ವಾದವನ್ನು ತಿರಸ್ಕರಿಸಿತು.
ಸಾಲ ವಸೂಲಾತಿ ನ್ಯಾಯಮಂಡಳಿ(DRT)ಯಲ್ಲಿ ವಸೂಲಾತಿ ಪ್ರಕರಣಗಳು ಬಾಕಿ ಇದ್ದರೂ, IBC ಅಡಿಯಲ್ಲಿನ ದಿವಾಳಿತನ ಪ್ರಕ್ರಿಯೆ ಮುಂದುವರಿಯಲು ಅದು ಅಡ್ಡಿಯಾಗುವುದಿಲ್ಲ ಎಂದು NCLT ಹೇಳಿದೆ.
ನಸೀರ್ ಅಹ್ಮದ್ ಅವರನ್ನು ಈ ಹಿಂದೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆರವುಗೊಳಿಸಲಾಗಿತ್ತು.
ಸೌಜನ್ಯ: The Hindu






