ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಕುರಿತು ಪರಿಶೀಲನೆ ನಡೆಸಲು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ

ಬೆಂಗಳೂರು: ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಕುರಿತು ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಹದೇವಪುರ ವಿಧಾನಸಭೆ ಕ್ಷೇತ್ರ ಸೇರಿದಂತೆ ರಾಜ್ಯದ ನಾನಾ ಕಡೆ ಚುನಾವಣೆ ಆಯೋಗದಿಂದಲೇ ಮತ ಅಕ್ರಮ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ರಾಜ್ಯ ಚುನಾವಣೆ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿತು. ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಅನ್ಯಾಯದ ವಿರುದ್ಧ ಹೋರಾಡಿ, ಮತದಾನದ ಹಕ್ಕು ರಕ್ಷಣೆ ಮಾಡಿಕೊಳ್ಳಲು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಾವು ಇಂದು ಪ್ರತಿಭಟನೆ ನಡೆಸಿದ್ದೆವು. ಕೋರ್ಟ್ ಆದೇಶ ಗಮನದಲ್ಲಿಟ್ಟುಕೊಂಡು, ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಮೂಲಕ ಬರುವುದು ಬೇಡ ಎಂದು ತೀರ್ಮಾನಿಸಿ ಪಕ್ಷದ ವತಿಯಿಂದ ಕೆಲವು ನಾಯಕರಷ್ಟೇ ಆಗಮಿಸಿದ್ದೇವೆ. ಚುನಾವಣೆಯಲ್ಲಿ ಹೇಗೆ ಅನ್ಯಾಯವಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಇದು ರಾಜ್ಯದ ಉದ್ದಗಲಕ್ಕೆ ನಡೆದಿರುವ ಅನ್ಯಾಯ. ನಾವು ಕೆಲವು ಕ್ಷೇತ್ರಗಳಲ್ಲಿ ಮಾತ್ರ ಅಧ್ಯಯನ ಮಾಡಿದ್ದೇವೆ. ನಾವು ಐದಾರು ಪ್ರದೇಶಗಳನ್ನು ಪ್ರಸ್ತಾಪಿಸಿ, ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ” ಎಂದರು.
“ಆಯೋಗಕ್ಕೆ ನಾವು ಮಹದೇವಪುರ ಹಾಗೂ ಗಾಂಧಿನಗರದ ಮಾದರಿಗಳನ್ನು ನಾವು ಸಲ್ಲಿಕೆ ಮಾಡಿಲ್ಲ. ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ್ದು ಕೇವಲ ಉದಾಹರಣೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ರೀತಿ ಅನ್ಯಾಯವಾಗಿದ್ದು, ಎಲ್ಲಾ ಕಡೆ ಪರಿಶೀಲನೆ ಮಾಡಿ ಈ ಅಕ್ರಮವನ್ನು ಪತ್ತೆಹಚ್ಚಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ರಿಟರ್ನಿಂಗ್ ಅಧಿಕಾರಿ, ಬಿಎಲ್ಒ ಸೇರಿದಂತೆ ಯಾರೇ ಆಗಿದ್ದರೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದೇವೆ” ಎಂದು ಮಾಹಿತಿ ನೀಡಿದರು.
“ಒಂದೇ ಮತದಾರರ ಹೆಸರನ್ನು ಐದು ಕಡೆ ಸೇರಿಸುವುದು, ಮನೆ ವಿಳಾಸ ಇಲ್ಲದೆ ಮತಪಟ್ಟಿಯಲ್ಲಿ ಸೇರಿಸುವುದು, ಖಾಲಿ ನಿವೇಶನಗಳ ವಿಳಾಸದಲ್ಲಿ ನಕಲಿ ಮತ ಸೇರಿಸುವುದು, ಮತಗಳನ್ನು ಪಕ್ಕದ ಬೂತ್ ಗಳಿಗೆ ವರ್ಗಾಯಿಸಿ ಅಕ್ರಮ ಎಸಗಿರುವುದಕ್ಕೆ ಸಾಕಷ್ಟು ದಾಖಲೆಗಳಿವೆ. ಹೀಗಾಗಿ ನಾವು ಆಯೋಗಕ್ಕೆ 8-10 ಅಂಶಗಳನ್ನು ಹಾಕಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮತದಾರರ ಪಟ್ಟಿಯ ಡಿಜಿಟಲ್ ಮಾದರಿ ಸೇರಿದಂತೆ ನಮಗೆ ಯಾವ ರೀತಿ ಮಾಹಿತಿ ಬೇಕು ಎಂದು ಆಯೋಗಕ್ಕೆ ಕೇಳಿದ್ದೇವೆಯೇ ಹೊರತು, ನಾವು ಸಂಪೂರ್ಣ ವಿವರವನ್ನು ನೀಡಿಲ್ಲ” ಎಂದು ಸ್ಪಷ್ಟನೆ ನೀಡಿದರು.
ಆಯೋಗದ ಅಧಿಕಾರಿಗಳು ಅಕ್ರಮ ಪರಿಶೀಲನೆಗೆ ಮುಂದಾಗಿರುವುದು ಸ್ವಾಗತಾರ್ಹ:
“ಚುನಾವಣಾ ಆಯೋಗಕ್ಕೆ ಹೊಸದಾಗಿ ಬಂದಿರುವ ಅನ್ಬುಕುಮಾರ್ ಅವರು ಪರಿಶೀಲನೆ ಆರಂಭಿಸಿರುವುದಾಗಿ ನಮಗೆ ತಿಳಿಸಿದರು. ಅವರ ಕ್ರಮ ಸ್ವಾಗತಾರ್ಹ. ಯಾವ ಕ್ಷೇತ್ರಗಳಲ್ಲಿ ಏನೆಲ್ಲಾ ಅನ್ಯಾಯ ಆಗಿದೆ, ಮುಂದೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ವಿಚಾರ ತಿಳಿಸುತ್ತೇವೆ. ಇದು ಕೇವಲ ಕರ್ನಾಟಕ ಅಥವಾ ಮಹದೇವಪುರಕ್ಕೆ ಸೀಮಿತವಾದ ಹೋರಾಟವಲ್ಲ” ಎಂದು ತಿಳಿಸಿದರು.
“ನಿಮ್ಮದೇ ಸರ್ಕಾರ, ನಿಮ್ಮದೇ ಅಧಿಕಾರಿ ಎಂದು ಕೆಲವರಲ್ಲಿ ಪ್ರಶ್ನೆ ಮೂಡಬಹುದು. ಎಲ್ಲಾ ನಿಯಂತ್ರಣ ಆಯೋಗದ ಕೈಯಲ್ಲಿ ಇರಲಿದೆ. ಕಂಪ್ಯೂಟರ್ ನಲ್ಲಿ ನನ್ನ ಹೆಸರು ಹಾಕಿದರೆ, ನನ್ನ ಹೆಸರಲ್ಲಿ ಎಷ್ಟು ಕಡೆ ಮತ ಇದೆ ಎಂದು ಗೊತ್ತಾಗುತ್ತದೆ. ಇದನ್ನು ಪರಿಶೀಲಿಸುವಷ್ಟು ಸೌಜನ್ಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಇರಬೇಕು. ಹೀಗಾಗಿ ನಾವು ಅವರ ಗಮನ ಸೆಳೆದಿದ್ದೇವೆ. ಇಡೀ ದೇಶದಲ್ಲಿ ಇದು ವ್ಯಾಪಕ ಚರ್ಚೆ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವು ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ, ಇದನ್ನು ಮುಂದುವರಿಸುತ್ತೇವೆ” ಎಂದರು.
ರಾಹುಲ್ ಗಾಂಧಿ ಅವರಿಂದ ಅಫಿಡವಿಟ್ ಬೇಕು ಎಂಬ ಆಯೋಗದ ಹೇಳಿಕೆ ಬಗ್ಗೆ ಕೇಳಿದಾಗ, “ಯಾವ ಅಫಿಡವಿಟ್ ಬೇಕು? ನಾನು, ರಾಹುಲ್ ಗಾಂಧಿ ಅವರೇ ಅಫಿಡವಿಟ್. ಚುನಾವಣೆಗೆ ಸ್ಪರ್ಧಿಸುವಾಗ, ಗೆದ್ದ ನಂತರ ನಮ್ಮಿಂದ ಅಫಿಡವಿಟ್ ತೆಗೆದುಕೊಂಡ ಮೇಲೆ ನಮ್ಮ ಮಾತಿಗಿಂತ ಇನ್ನೇನು ಅಫಿಡವಿಟ್ ಬೇಕು? ನಾವು ಸುಳ್ಳು ಹೇಳಿದ್ದರೆ, ಗಲ್ಲಿಗೆ ಹಾಕಿ. ರಾಹುಲ್ ಗಾಂಧಿ ಅವರ ಆರೋಪವನ್ನು ಆಯೋಗದವರು ನಿರಾಕರಿಸಿದ್ದಾರಾ? ಅವರು ಅಫಿಡವಿಟ್ ಕೇಳಿದ ಕಾರಣಕ್ಕೆ ನಾವು ಅವರಿಂದ ಮಾಹಿತಿ ಬಯಸುತ್ತಿದ್ದೇವೆ. ನಾವು ಪಡೆದಿರುವ ಮಾಹಿತಿ ಆರ್ ಟಿಐ ಮೂಲಕ ಸಂಗ್ರಹಿಸಿರುವ ಮಾಹಿತಿ” ಎಂದು ತಿಳಿಸಿದರು.
ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ನಾವು ಬಿಜೆಪಿ ನಾಯಕರ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ನಮ್ಮ ಹೋರಾಟ ಏನಿದ್ದರೂ ಚುನಾವಣಾ ಆಯೋಗದ ವಿರುದ್ಧ. ಅವರು ಒಂದು ಪಕ್ಷದ ಧ್ವನಿಯಾಗಿ ಕೆಲಸ ಮಾಡಬಾರದು ಎಂಬುದು ನಮ್ಮ ಹೋರಾಟ” ಎಂದು ತಿಳಿಸಿದರು.







